ಶುದ್ಧ ಸಸ್ಯಾಹಾರಿ ಕುಟುಂಬಕ್ಕೆ ಮಾಂಸಾಹಾರಿ ಪಿಜ್ಜಾವನ್ನ ಕಳುಹಿಸಿದ ತಪ್ಪಿಗೆ ಪಿಜ್ಜಾ ತಯಾರಕ ಕಂಪನಿಯೊಂದು ಭಾರೀ ಸಂಕಷ್ಟಕ್ಕೆ ಸಿಲುಕಿದೆ. ಉತ್ತರ ಪ್ರದೇಶದ ಘಾಜಿಯಾಬಾದ್ ನಿವಾಸಿಯಾಗಿರುವ ಮಹಿಳೆ 1 ಕೋಟಿ ರೂಪಾಯಿ ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.
ಗ್ರಾಹಕ ಸೇವಾ ಕೋರ್ಟ್ನ್ನು ಸಂಪರ್ಕಿಸಿದ ದೀಪಾಲಿ ತ್ಯಾಗಿ ಪಿಜ್ಜಾ ಕಂಪನಿಯ ಅಚಾತುರ್ಯದಿಂದ ನಮ್ಮ ಧರ್ಮಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರನ್ನ ನೀಡಿದ್ದಾರೆ.
ಕೋರ್ಟ್ಗೆ ಸಲ್ಲಿಸಲಾದ ಅರ್ಜಿಯಲ್ಲಿ ಮಹಿಳೆ ತಾವು ಶುದ್ಧ ಶಾಖಾಹಾರಿಯಾಗಿದ್ದು ಪಿಜ್ಜಾ ಸಂಸ್ಥೆ ನನ್ನ ಹಾಗೂ ನನ್ನ ಕುಟುಂಬಸ್ಥರ ಧರ್ಮದ ಆಚರಣೆಗೆ ಭಂಗ ತಂದಿದೆ ಎಂದು ಆರೋಪಿಸಿದ್ದಾರೆ.
ಮಹಿಳೆ 2019ರ ಮಾರ್ಚ್ 21ರಂದು ಪಿಜ್ಜಾ ಆರ್ಡರ್ ಮಾಡಿದ್ದರು. ಹೋಳಿ ಹಬ್ಬದ ದಿನ ಮನೆಯಲ್ಲಿ ಎಲ್ಲರೂ ಹಸಿದಿದ್ದ ಕಾರಣ ಪಿಜ್ಜಾ ಆರ್ಡರ್ ಮಾಡಲಾಗಿತ್ತು.
ಪಿಜ್ಜಾ ಬರುವುದು ತುಂಬಾನೇ ತಡವಾದರೂ ಸಹ ಮಹಿಳೆ ಯಾವುದೇ ದೂರನ್ನ ನೀಡಿರಲಿಲ್ಲ. ಆದರೆ ಪಿಜ್ಜಾವನ್ನ ತಿನ್ನುತ್ತಿದ್ದಂತೆಯೇ ಅದರಲ್ಲಿ ಮಾಂಸ ಇರುವ ವಿಚಾರ ತಿಳಿದಿದೆ. ಮಶ್ರೂಮ್ ಪಿಜ್ಜಾದ ಬದಲು ಅವರು ನಮಗೆ ಮಾಂಸಾಹಾರಿ ಪಿಜ್ಜಾ ನೀಡಿದ್ದರು ಎಂದು ಹೇಳಿದ್ದಾರೆ.
ಈ ಘಟನೆ ನಡೆದ ನಾಲ್ಕು ದಿನದ ಬಳಿಕ ಪಿಜ್ಜಾ ಔಟ್ಲೆಟ್ನ ಮ್ಯಾನೇಜರ್ ಈಕೆಯ ಕುಟುಂಬಕ್ಕೆ ಉಚಿತವಾಗಿ ಪಿಜ್ಜಾ ಡೆಲಿವರಿ ನೀಡಿದ್ದರಂತೆ. ಆದರೆ ಈ ಆಫರ್ನ್ನು ದೀಪಾಲಿ ತಿರಸ್ಕರಿಸಿದ್ದಾರೆ. ಈ ಘಟನೆಯಿಂದಾಗಿ ನಮ್ಮ ಸಂಸ್ಕೃತಿಗೆ ಧಕ್ಕೆ ಉಂಟಾಗಿದೆ. ನಾವು ಮಾನಸಿಕವಾಗಿ ನೊಂದಿದ್ದೇವೆ. ಹೀಗಾಗಿ ನಾನು ಕಾನೂನು ಬದ್ಧವಾಗಿ ಹೋರಾಡುತ್ತೇನೆ ಎಂದು ಹೇಳಿದ್ದಾರೆ.