ಬರೇಲಿ ಮೊಬೈಲ್ ಅಂಗಡಿಯಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಸತ್ತ ಪ್ರಾಣಿಯ ಅವಶೇಷ ಎಂದು ವಿಲೇವಾರಿ ಮಾಡಲಾಗಿದ್ದ ಶವ ಪ್ರಾಣಿಯದ್ದಲ್ಲ ಬದಲಾಗಿ ಮನುಷ್ಯನದ್ದು ಎಂಬ ವಿಚಾರ ತಡವಾಗಿ ಬೆಳಕಿಗೆ ಬಂದಿದೆ.
ಮೊಬೈಲ್ ಫೋನ್ ಅಂಗಡಿ ಮಾಲೀಕ ಮೊಹಮ್ಮಸ್ ನಯೀಮ್ ಅಂಗಡಿಗೆ ಬೆಂಕಿ ತಗುಲಿದೆ ಅಂತಾ ಶನಿವಾರ ರಾತ್ರಿ ಪೊಲೀಸರು ಕರೆ ಮಾಡಿ ಮಾಹಿತಿ ನೀಡಿದ್ದರು. ಶಹಜಹಾನ್ಪುರದ ರೋಜಾ ಪಟ್ಟಣದಲ್ಲಿದ್ದ ಅಂಗಡಿ ಸರಿಪಡಿಸಲಾಗದಷ್ಟರ ಮಟ್ಟಿಗೆ ಸುಟ್ಟು ಹೋಗಿತ್ತು.
ಅವಶೇಷಗಳ ಮಧ್ಯೆ ಸುಟ್ಟ ಫೋನ್ಗಳು, ಅಂಗಡಿಯ ಇತರೆ ವಸ್ತುಗಳ ಜೊತೆ ಸುಟ್ಟ ದೇಹವೊಂದು ಪತ್ತೆಯಾಗಿತ್ತು. ಅಂಗಡಿಯ ಬೆಂಕಿಗೆ ಯಾವುದೋ ಬಡಪಾಯಿ ಪ್ರಾಣಿ ಸತ್ತಿದೆ ಎಂದುಕೊಂಡಿದ್ದ ನಯೀಮ್ ಅದನ್ನ ವಿಲೇವಾರಿ ಮಾಡಿದ್ದರು. ಆದರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅದು ಪ್ರಾಣಿಯದ್ದಲ್ಲ ಬದಲಾಗಿ ಮನುಷ್ಯನ ಮೃತದೇಹ ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.
ತನಿಖೆ ಬಳಿಕ ಮೃತ ವ್ಯಕ್ತಿ ಒಬ್ಬ ಕಳ್ಳನಾಗಿದ್ದ ರಾತ್ರಿ ಯಾರೂ ಇರದ ವೇಳೆ ಮೇಲ್ಛಾವಣಿಯಿಂದ ಇಳಿದು ದರೋಡೆ ಮಾಡ್ತಿದ್ದ ಎಂದು ಅಂದಾಜಿಸಲಾಗಿದೆ. ಈ ವೇಳೆ ವಿದ್ಯುತ್ ಲೈನ್ ತಾಕಿ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಶವಪರೀಕ್ಷೆ ನಡೆಸಿದ ವೈದ್ಯರು ದೇಹ ತೀವ್ರವಾಗಿ ಸುಟ್ಟಿರೋದ್ರಿಂದ ವಯಸ್ಸನ್ನ ಅಂದಾಜಿಸೋದು ಕಷ್ಟ ಎಂದು ಹೇಳಿದ್ದಾರೆ. ಮೃತದೇಹದಿಂದ ಲಾಕೆಟ್ ಒಂದನ್ನ ವಶಪಡಿಸಿಕೊಳ್ಳಲಾಗಿದ್ದು ಪೊಲೀಸರು ಅಂಗಡಿ ಮಾಲೀಕನನ್ನ ತನಿಖೆಗೆ ಒಳಪಡಿಸಿದ್ದಾರೆ.