ಅಂಚೆ ಇಲಾಖೆಯು ಸಾಮಾನ್ಯವಾಗಿ ವಿಶೇಷ ಸಂದರ್ಭದಲ್ಲಿ ವಿಶೇಷ ಅಂಚೆಚೀಟಿಗಳನ್ನು ಹೊರ ತರುವ ಸಂಪ್ರದಾಯ ಇಟ್ಟುಕೊಂಡಿದೆ. ಸಂಸ್ಥೆಗಳು, ವ್ಯಕ್ತಿಗಳ ವಿಶೇಷ ಸಾಧನೆ ಗುರುತಿಸಿ ಸಾಂಕೇತಿಕವಾಗಿ ಅಂಚೆಚೀಟಿ ಪ್ರಕಟಿಸುತ್ತದೆ.
ಆದರೆ ಗ್ಯಾಂಗ್ಸ್ಟರ್ಗಳ ಚಿತ್ರವಿರುವ ಅಂಚೆಚೀಟಿ ಪ್ರಕಟಿಸಿ ಇದೀಗ ವಿವಾದ ಮೈಮೇಲೆ ಎಳೆದುಕೊಂಡಿದೆ.
ಉತ್ತರ ಪ್ರದೇಶದ ಕಾನ್ಪುರದಲ್ಲಿ ಇಂಥ ಒಂದು ಅಚಾತುರ್ಯ ನಡೆದಿದ್ದು, ಅಂಚೆ ಇಲಾಖೆ ಪ್ರಕಟಿಸಿದ ಐದು ರೂ.ನ ಅಂಚೆಚೀಟಿಯಲ್ಲಿ ಗ್ಯಾಂಗ್ಸ್ಟರ್ಗಳಾದ ಛೋಟಾ ರಾಜನ್ ಮತ್ತು ಮುನ್ನಾ ಭಜರಂಗಿ ಅವರ ಚಿತ್ರವಿದೆ.
ಅವಘಡ ಗಮನಿಸಿದ ಇಲಾಖೆ ಹಿರಿಯ ಅಧಿಕಾರಿಗಳು ಇದೀಗ ಸಿಬ್ಬಂದಿಯನ್ನು ಅಮಾನತು ಮಾಡಿ, ಆಂತರಿಕ ತನಿಖೆಗೆ ಆದೇಶಿಸಿದ್ದಾರೆ.
ಅಂಚೆ ಇಲಾಖೆಯ ಮೈ ಸ್ಟ್ಯಾಂಪ್ ಎಂಬ ಯೋಜನೆಯಡಿ 300 ರೂ. ಪಾವತಿಸಿ ಸಾಧಕರ ಫೋಟೋ ನೀಡಿ ಸ್ಟ್ಯಾಂಪ್ ಪ್ರಕಟಿಸುವ ಯೋಜನೆ ಇದೆ. ಸಂಬಂಧಪಟ್ಟ ಕುಟುಂಬದವರು ವ್ಯಕ್ತಿಯ ಸೂಕ್ತ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ. ಆದರೆ ಕಿಡಿಗೇಡಿಗಳು ಛೋಟಾ ರಾಜನ್ ಹಾಗೂ ಮುನ್ನಾ ಭಜರಂಗಿ ಚಿತ್ರವನ್ನು ನೀಡಿ ಪ್ರಕಟಿಸಿದ್ದಾರೆ.
ಈ ತಪ್ಪನ್ನು ಕ್ಲರಿಕಲ್ ದೋಷ ಎಂದು ಅಲ್ಲಿನ ಪೋಸ್ಟ್ ಮಾಸ್ಟರ್ ಜನರಲ್ ಹೇಳಿಕೊಂಡಿದ್ದಾರೆ. ತಪ್ಪು ಹೇಗೆ ಸಂಭವಿಸಿದೆ, ಗ್ಯಾಂಗ್ಸ್ಟರ್ಗಳ ಗುರುತಿಸುವಲ್ಲಿ ಹೇಗೆ ವಿಫಲವಾದರು ಎಂದು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.