ಕ್ರೂರ ಮೃಗಗಳು ಅಂತಾ ಮೂಕ ಪ್ರಾಣಿಗಳಿಗೆ ಕರೆಯಲಾಗುತ್ತೆ. ಆದರೆ ಅಸಲಿಗೆ ಮನುಷ್ಯನಿಗಿಂತ ಕ್ರೂರ ಪ್ರಾಣಿ ಬೇರೊಂದಿಲ್ಲ ಎಂಬ ಮಾತನ್ನ ನಾವು ತಳ್ಳಿಹಾಕುವಂತಿಲ್ಲ. ತನ್ನ ಲಾಭಕ್ಕಾಗಿ ಮನುಷ್ಯ ಇಳಿದಷ್ಟು ಕೆಳಗಿನ ಹಂತಕ್ಕೆ ಯಾವ ಪ್ರಾಣಿಗಳೂ ಇಳಿಯಲಾರವು. ಈ ಮಾತಿಗೆ ಸ್ಪಷ್ಟ ಉದಾಹರಣೆ ಉತ್ತರ ಪ್ರದೇಶದ ಪಂಚಾಯತ್ ಚುನಾವಣೆಯೊಂದರ ಸಮಯದಲ್ಲಿ ನಡೆದ ಕ್ಯಾಂಪೇನ್ ದೃಶ್ಯಾವಳಿ.
ಜನರ ಮತವನ್ನ ಸೆಳೆಯುವುದಕ್ಕೋಸ್ಕರ ಅಭ್ಯರ್ಥಿಗಳು ಇನ್ನಿಲ್ಲದ ಹರಸಾಹಸ ಪಡ್ತಾರೆ. ಮನೆ ಮನೆಗೆ ಮತ ಕೇಳೋದು ಕ್ಯಾಂಪೇನ್ ಮಾಡೋದ್ರ ಜೊತೆಗೆ ಇಲ್ಲೊಂದಿಷ್ಟು ಮಂದಿ ಶ್ವಾನವನ್ನೂ ತಮ್ಮ ಪ್ರಚಾರ ಕಾರ್ಯಕ್ಕೆ ಬಳಕೆ ಮಾಡಿಕೊಂಡಿದ್ದಾರೆ.
ರಾಯ್ ಬರೇಲಿ ಹಾಗೂ ಬಲ್ಲಿಯಾ ಜಿಲ್ಲೆಯ ಇಬ್ಬರು ಅಭ್ಯರ್ಥಿಗಳು ತಮ್ಮ ಚುನಾವಣಾ ಪ್ರಚಾರಕ್ಕಾಗಿ ಬೀದಿ ನಾಯಿಗಳನ್ನ ಬಳಸಿಕೊಂಡಿದ್ದಾರೆ. ತಮ್ಮ ಪೋಸ್ಟರ್ ಹಾಗೂ ಪಾಂಪ್ಲೆಟ್ಗಳನ್ನ ಶ್ವಾನಗಳ ಮೈಮೇಲೆ ಅಂಟಿಸಿದ್ದಾರೆ. ಈ ಶ್ವಾನಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಪ್ರಾಣಿಪ್ರಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿ ಪ್ರಾಣಿ ದಯಾ ಸಂಘದ ಕಾರ್ಯಕರ್ತೆ ರೀನಾ ಮಿಶ್ರಾ, ಮನುಷ್ಯನ ಮುಖದ ಮೇಲೂ ಇದೇ ರೀತಿಯ ಪೋಸ್ಟರ್ಗಳನ್ನ ಅಂಟಿಸಿದ್ರೆ ಹೇಗೆ ಎನಿಸಬಹುದು..? ಶ್ವಾನಗಳಿಗೆ ಮನುಷ್ಯರಂತೆ ಪ್ರತಿಭಟಿಸೋಕೆ ಬರಲ್ಲ ಅಂತಾ ಅವುಗಳಿಗೆ ಈ ರೀತಿ ಕಷ್ಟ ಕೊಡೋದು ಎಷ್ಟು ಸರಿ..? ಪೊಲೀಸರು ಈ ರೀತಿ ಕೃತ್ಯ ಎಸಗಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ರು.