
ಬುಲಂದ್ ಶಹರ್: ಪಕ್ಕದ ಮನೆ ಮಹಿಳೆ ಸ್ನಾನ ಮಾಡುವಾಗ ಬೆತ್ತಲೆ ದೃಶ್ಯಗಳನ್ನು ಚಿತ್ರೀಕರಣ ಮಾಡಿಕೊಂಡ 50 ವರ್ಷದ ವ್ಯಕ್ತಿ ಮಹಿಳೆಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ.
ಎರಡು ವರ್ಷಗಳಿಂದ ಮಹಿಳೆ ಅತ್ಯಾಚಾರಕ್ಕೆ ಒಳಗಾಗಿದ್ದು ಉತ್ತರ ಪ್ರದೇಶ ಮುಖ್ಯಮಂತ್ರಿಯವರ ಕಂಪ್ಲೇಂಟ್ ಪೋರ್ಟಲ್ ಗೆ ದೂರು ನೀಡಿ ನೆರವಿಗೆ ಮನವಿ ಮಾಡಿದ್ದಾರೆ.
ವ್ಯಕ್ತಿ ಮತ್ತು ಮಹಿಳೆ ತಮ್ಮ ಕುಟುಂಬಗಳೊಂದಿಗೆ ಬುಲಂದ್ ಶಹರ್ ಸಿಕಂದ್ರಾಬಾದ್ ಟೌನ್ ನಲ್ಲಿ ವಾಸವಾಗಿದ್ದಾರೆ. 2 ವರ್ಷಗಳ ಹಿಂದೆ ಮಹಿಳೆ ಸ್ನಾನ ಮಾಡುವ ಸಂದರ್ಭದಲ್ಲಿ ದೃಶ್ಯಗಳನ್ನು ಸೆರೆ ಹಿಡಿದಿದ್ದ ಆರೋಪಿ ಒಂದು ದಿನ ರಾತ್ರಿ ಮಹಿಳೆಯ ಪತಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗುತ್ತಿದ್ದಂತೆ ಮಹಿಳೆಯ ಮನೆಯೊಳಗೆ ಬಂದು ಅತ್ಯಾಚಾರ ಎಸಗಿದ್ದಾನೆ.
ಅಂದಿನಿಂದಲೂ ಜಾಲತಾಣಗಳಲ್ಲಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಸಿ ನಿರಂತರ ಅತ್ಯಾಚಾರ ಎಸಗುತ್ತಿದ್ದ. ವಿರೋಧ ವ್ಯಕ್ತಪಡಿಸಿದಾಗ ಮಗನವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ವಿಡಿಯೋ ವೈರಲ್ ಮಾಡುವುದಾಗಿ ಬೆದರಿಸಿ ನಿರಂತರ ಅತ್ಯಾಚಾರ ಎಸಗುತ್ತಿದ್ದ ಎಂದು ಮಹಿಳೆ ದೂರು ನೀಡಿದ್ದಾಳೆ.
10 ದಿನಗಳ ಹಿಂದೆ ಮತ್ತೊಮ್ಮೆ ಅತ್ಯಾಚಾರಕ್ಕೆ ಯತ್ನಿಸಿದ ವೇಳೆ ರೋಸಿ ಹೋದ ಮಹಿಳೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿದ್ದಾಳೆನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕೊಟ್ವಾಲಿ ಇನ್ಸ್ ಪೆಕ್ಟರ್ ಜಿತೇಂದ್ರ ಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ. ಲಿಖಿತ ದೂರು ನೀಡಿದಲ್ಲಿ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.