ಕೊರೋನಾ ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ವಲಸೆ ಕಾರ್ಮಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಶ್ರಮಿಕ್ ರೈಲುಗಳನ್ನು ಓಡಿಸುತ್ತಿದೆ.
ಕಾರ್ಮಿಕರೆಲ್ಲ ಈ ರೈಲಿನಲ್ಲಿ ಪ್ರಯಾಣಿಸಲು ಹೆಸರು ನೋಂದಾಯಿಸಿಕೊಂಡು ಸರತಿ ಮೇಲೆ ತೆರಳುತ್ತಿದ್ದಾರೆ. ಉತ್ತರ ಪ್ರದೇಶದ ಗಾಜಿಯಾಬಾದ್ ನಲ್ಲಿ ಒಬ್ಬ ಕಾರ್ಮಿಕನಿಗೆ ಮೂರು ದಿನ ಕಾದರೂ ತನಗೆ ಹಾಗೂ ತನ್ನ ಕುಟುಂಬಕ್ಕೆ ಅವಕಾಶ ಸಿಗಲಿಲ್ಲ.
ಇದರಿಂದ ಬೇಸರಗೊಂಡ ಆತ ನೇರವಾಗಿ ಕಾರ್ ಶೋ ರೂಂ ಹೋಗಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ದಾನೆ.
ಪೇಂಟರ್ ವೃತ್ತಿ ಮಾಡುವ ಲಲ್ಲನ್ ತನ್ನ ಉಳಿತಾಯ ಖಾತೆಯಲ್ಲಿದ್ದ 1.90 ಲಕ್ಷವನ್ನು ಹಿಂಪಡೆದು 1.50 ಲಕ್ಷ ರೂ. ಮೌಲ್ಯದ ಕಾರು ಖರೀದಿಸಿ ತನ್ನೂರು ಗೋರಕ್ ಪುರಕ್ಕೆ ತೆರಳಿದ್ದಾರೆ.
ಜತೆಗೆ ಇನ್ನೆಂದಿಗೂ ವಾಪಸು ಮರಳುವುದಿಲ್ಲ ಎಂದು ಶಪಥ ಮಾಡಿದ್ದಾರೆ. ಮೂರು ದಿನ ಕಾದರೂ ನಮ್ಮ ಕುಟುಂಬಕ್ಕೆ ರೈಲಿನಲ್ಲಿ ಸೀಟು ಸಿಗದಾಯಿತು. ಬಸ್ ನಲ್ಲಿ ಪಯಣಿಸಲು ಸಾಮಾಜಿಕ ಅಂತರ ಇರದ ಕಾರಣ ಭಯವಾಯಿತು. ಈ ಕಾರಣಕ್ಕೆ ಉಳಿತಾಯದ ಹಣ ಬಳಸಿ ಕಾರು ಖರೀದಿಸಿದೆ. ಈಗ ನನ್ನ ಕುಟುಂಬ ಸುರಕ್ಷಿತವಾಗಿದೆ ಎಂದು ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.