ಕೇಂದ್ರ ಸರ್ಕಾರದ ಕೃಷಿ ಮಸೂದೆಯನ್ನ ವಿರೋಧಿಸಿ ನಡೆಯುತ್ತಿರುವ ರೈತ ಪ್ರತಿಭಟನೆಗೆ ಅನೇಕರು ವಿಭಿನ್ನ ಮಾರ್ಗಗಳ ಮೂಲಕ ಬೆಂಬಲ ನೀಡುತ್ತಿದ್ದಾರೆ.
ಡಿಸೆಂಬರ್ನಲ್ಲಿ ಹರಿಯಾಣದ ವರನೊಬ್ಬ ತನ್ನ ಐಷಾರಾಮಿ ಕಾರನ್ನ ಬದಿಗಿಟ್ಟು ಟ್ರ್ಯಾಕ್ಟರ್ನಲ್ಲಿ ಕಲ್ಯಾಣ ಮಂಟಪಕ್ಕೆ ಬರುವ ಮೂಲಕ ರೈತರಿಗೆ ಬೆಂಬಲ ನೀಡಿದ್ದರು.
ಕೆಲ ದಿನಗಳ ಬಳಿಕ ರೈತ ಮಹಿಳೆ ಮಂಜಿತ್ ಕೌರ್ ತನ್ನ ಸಹಚರರ ಜೊತೆ ಜೀಪ್ನ್ನ ತಾವೇ ಓಡಿಸಿಕೊಂಡು ಪ್ರತಿಭಟನಾ ಸ್ಥಳಕ್ಕೆ ಬಂದು ಸುದ್ದಿಯಾಗಿದ್ದರು.
ತೀರಾ ಇತ್ತೀಚೆಗೆ ಉತ್ತರಾಖಂಡ್ನ ದಂಪತಿ ತಮ್ಮ ವಿವಾಹ ಸಂದರ್ಭದಲ್ಲಿ ರೈತ ಗೀತೆಗಳನ್ನ ಹಾಡುವ ಮೂಲಕ ಹಾಗೂ ಟ್ರ್ಯಾಕ್ಟರ್ಗಳನ್ನ ಬಳಕೆ ಮಾಡುವ ಮೂಲಕ ಕೃಷಿ ಮಸೂದೆಯನ್ನ ವಿರೋಧಿಸಿದ್ದರು.
ಇದೀಗ ಉತ್ತರ ಪ್ರದೇಶದ ಬಾಗ್ಪತ್ನ ಸಿಖೇರಾ ಗ್ರಾಮದ 25 ವರ್ಷದ ಯುವಕ ತನ್ನ ಗ್ರಾಮದಿಂದ ಘಾಜಿಪುರಕ್ಕೆ ಓಡಿಕೊಂಡೇ ಸಾಗುವ ಮೂಲಕ ಸುದ್ದಿಯಾಗ್ತಿದ್ದಾರೆ.
ಮೋನು ದಾಗರ್ ಎಂಬಾತ ತನ್ನ ಸ್ನೇಹಿತರೊಂದಿಗೆ 5100 ರೂಪಾಯಿ ಹಾಗೂ 5 ಕೆಜಿ ಬಾದಾಮಿಯನ್ನ ಪಣಕ್ಕಿಟ್ಟಿದ್ದರು. ಬಳಿಕ ಈ ಸವಾಲಿನ ಭಾಗವಾಗಿ ತನ್ನ ಹಳ್ಳಿಯಿಂದ ಘಾಜಿಪುರ ಗಡಿಗೆ ಓಡಿ ಬರುವ ಮೂಲಕ ಈ ಸವಾಲನ್ನ ಗೆದ್ದಿದ್ದಾರೆ.
ಭಾನುವಾರ ಬೆಳಗ್ಗೆ 11 ಗಂಟೆಗೆ ತಮ್ಮ ಗ್ರಾಮದಿಂದ ಓಡಲು ಆರಂಭಿಸಿದ ಮೋನು ಸಂಜೆ 4 ಗಂಟೆ ಸುಮಾರಿಗೆ ಗಡಿ ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ನಿರಂತರ ಓಟದಿಂದಾಗಿ ಮೋನು ಆರೋಗ್ಯದಲ್ಲಿ ಏರುಪೇರಾಗಿದ್ದು ಚಿಕಿತ್ಸೆಗಾಗಿ ವೈದ್ಯಕೀಯ ಶಿಬಿರಕ್ಕೆ ದಾಖಲಿಸಲಾಯ್ತು.