ನಿಗೂಢ ಸನ್ನಿವೇಶವೊಂದರಲ್ಲಿ, 37 ವರ್ಷ ವಯಸ್ಸಿನ ಪತ್ರಕರ್ತ ಹಾಗೂ ಆತನ ಸ್ನೇಹಿತನ ಮೈ ಮೇಲೆ ಸುಟ್ಟ ಗಾಯಗಳೊಂದಿಗೆ ಮೃತ ಸ್ಥಿತಿಯಲ್ಲಿ ಸಿಕ್ಕಿರುವ ಘಟನೆ ಉತ್ತರ ಪ್ರದೇಶದ ಬಲ್ರಾಮ್ಪುರ ಜಿಲ್ಲೆಯಲ್ಲಿ ನಡೆದಿದೆ.
ಈ ಇಬ್ಬರೂ ಸತ್ತ ಅದೇ ರಾತ್ರಿಯಂದೇ ಅವರೊಂದಿಗೆ ಎಣ್ಣೆ ಪಾರ್ಟಿ ಮಾಡುತ್ತಿದ್ದ ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ತಮ್ಮ ಮನೆಯಲ್ಲಿ ಸ್ಫೋಟವೊಂದು ಸಂಭವಿಸಿದ್ದು, ಅದರ ಹಿಂದೆ ಕೆಲವರ ಕೈವಾಡವಿದೆ ಎಂದು ರಾಕೇಶ್ ತಂದೆ ಆಪಾದನೆ ಮಾಡಿದ್ದಾರೆ.
ಹಿಂದಿ ದೈನಿಕ ರಾಷ್ಟ್ರೀಯ ಸ್ವರೂಪ್ನಲ್ಲಿ ಪತ್ರಕರ್ತ ರಾಕೇಶ್ ಸಿಂಗ್ ನಿರ್ಭಿಕ್ ಕೆಲಸ ಮಾಡುತ್ತಿದ್ದರು. ಆತನ ಸ್ನೇಹಿತ ಪಿಂಟು ಡಿಜೆಯಾಗಿ ಕೆಲಸ ಮಾಡುತ್ತಿದ್ದರು. ಪ್ರಕರಣ ಸಂಬಂಧ ಐಪಿಸಿ ಸಂಹಿತೆಯಲ್ಲಿ ಕೊಲೆ ಆರೋಪಕ್ಕೆ ಕೊಟ್ಟಿರುವ ವಿಧಿಗಳ ಅಡಿ ಕೇಸ್ ದಾಖಲಿಸಿಕೊಳ್ಳಲಾಗಿದೆ.
“ನಾವು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಆದರೆ ಯಾವುದೇ ಸ್ಪೋಟವಾದ ಬಗ್ಗೆ ಸುಳಿವುಗಳು ಸಿಕ್ಕಿಲ್ಲ. ಮನೆಯಲ್ಲಿ ಮಂಚ ಒಂದು ಇದ್ದು, ಅಲ್ಲಿನ ಬೆಂಕಿ ಅಂಟಿಕೊಂಡಿರುವ ಸಾಧ್ಯತೆ ಇದೆ. ಹೊರಗಡೆಯಿಂದ ಮನೆಯ ಗೋಡೆಯೊಂದು ಕುಸಿದು ಬಿದ್ದಿದೆ. ಮನೆಯೂ ಸುಟ್ಟು ಹೋಗಿದೆ” ಎಂದು ಬಲ್ರಾಮ್ಪುರ ಎಸ್ಪಿ ದೇವ್ ರಂಜನ್ ವರ್ಮಾ ತಿಳಿಸಿದ್ದಾರೆ.