ಪಾಪಿ ಸಹೋದರನೊಬ್ಬ ತನ್ನ ವಿವಾಹಿತ ತಂಗಿಯ ಮೇಲೆಯೇ ಅತ್ಯಾಚಾರವೆಸೆಗಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ. ಆರೋಪಿ ಅತ್ಯಾಚಾರ ನಡೆಸುತ್ತಿದ್ದ ವೇಳೆ ಆತನ ಸ್ನೇಹಿತ ವಿಡಿಯೋ ಚಿತ್ರೀಕರಿಸಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ನನ್ನ ಪತಿ ಮನೆಯಲ್ಲಿ ಇಲ್ಲದೇ ಇದ್ದ ವೇಳೆ ಮನೆಗೆ ಪಾನಮತ್ತನಾಗಿ ಬಂದಿದ್ದ ನನ್ನ ಅಣ್ಣ ಮತ್ತಾತನ ಸ್ನೇಹಿತ ಈ ಕೃತ್ಯ ಎಸಗಿದ್ದಾರೆ. ಯಾರಿಗಾದರೂ ಈ ಬಗ್ಗೆ ಬಾಯ್ಬಿಟ್ಟಿದ್ದೇ ಹೌದಾದರೆ ವಿಡಿಯೋವನ್ನ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡೋದಾಗಿ ನನಗೆ ಬೆದರಿಕೆ ಒಡ್ಡಿದ್ದರು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನಲ್ಲಿ ಸಂತ್ರಸ್ತೆ, ನಾನು ಘಟನೆ ನಡೆದ ಬಳಿಕ ಈ ಬಗ್ಗೆ ನನ್ನ ಪತಿಗೆ ಮಾಹಿತಿ ನೀಡಿದ್ದೆ. ಅವರು ಕೂಡಲೇ ಪೊಲೀಸರನ್ನ ಭೇಟಿಯಾಗುವವರಿದ್ದರು. ಆದರೆ ಕುಟುಂಬದ ಮರ್ಯಾದೆಗೋಸ್ಕರ ನನ್ನ ಪೋಷಕರು ದೂರನ್ನ ನೀಡದಂತೆ ನನಗೆ ಒತ್ತಡ ಹೇರಿದ್ದರು. ಆದರೆ ಸಹೋದರನ ಕಿರುಕುಳ ಹಾಗೂ ಬೆದರಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ನಾನು ಈ ದೂರನ್ನ ನೀಡಿದ್ದೇನೆ ಎಂದು ಬರೆಯಲಾಗಿದೆ.
ಸಂತ್ರಸ್ತೆಯ ಸಹೋದರನ ವಿರುದ್ಧ ಐಪಿಸಿ ಸೆಕ್ಷನ್ 376, 452 ಹಾಗೂ 506ನಡಿ ಪ್ರಕರಣ ದಾಖಲಾಗಿದೆ. ಮತ್ತು ಘಟನೆ ವೇಳೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಸ್ನೇಹಿತನ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಆರೋಪಿಗಳಿಬ್ಬರೂ ಪರಾರಿಯಾಗಿದ್ದು ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.