ಉತ್ತರ ಪ್ರದೇಶದ ಪ್ರೌಢಶಿಕ್ಷಣ ಮಂಡಳಿಯು ತನ್ನ ವಿದ್ಯಾರ್ಥಿಗಳಿಗೆ ಗಂಗಾ ನದಿಯ ಸಂರಕ್ಷಣೆಯ ಮಹತ್ವ ಹಾಗೂ ಆ ಬಗ್ಗೆ ದೇಶವಾಸಿಗಳಿಗೆ ಇರಬೇಕಾದ ಜವಾಬ್ದಾರಿಯ ಅರಿವು ಮೂಡಿಸಲು ಪಠ್ಯದಲ್ಲಿ ಈ ವಿಷಯ ತರಲು ನಿರ್ಧರಿಸಿದೆ.
ನಮಾಮಿ ಗಂಗೆ ಇಲಾಖೆಯ ಅಭಿಯಾನದಡಿ ಈ ಹೆಜ್ಜೆ ಇಡುತ್ತಿರುವ ದೇಶದ ಮೊದಲ ರಾಜ್ಯ ಉತ್ತರ ಪ್ರದೇಶವಾಗಿದೆ. ಗಂಗಾ ನದಿಯ ಸಂರಕ್ಷಣೆ ಹಾಗೂ ಜಲ ಮಾಲಿನ್ಯದ ಕುರಿತಾಗಿ ಪಠ್ಯಗಳನ್ನು ಸಿದ್ಧಪಡಿಸಲಾಗಿದ್ದು, ಮಂಡಳಿಗೆ ಕಳುಹಿಸಲಾಗಿದೆ. ಪಠ್ಯವೀಗ ತಜ್ಞರ ಸಮಿತಿಯ ಮುಂದೆ ಇದ್ದು, ಅವರ ಅನುಮತಿ ಸಿಕ್ಕ ಕೂಡಲೇ ಶಾಲಾ ಪಠ್ಯಪುಸ್ತಕಗಳಲ್ಲಿ ಕಾಣಲಿದೆ.
ಹಿಮಾಲಯ ಪರ್ವತಗಳಿಂದ ಬಂಗಾಳ ಕೊಲ್ಲಿವರೆಗೆ ಗಂಗಾ ನದಿಯ ಪಯಣ ಹಾಗೂ ಅದರ ಪವಿತ್ರ ಜಲವನ್ನು ಮಾಲಿನ್ಯದಿಂದ ಕಾಪಾಡಲು ಏನೆಲ್ಲಾ ಮಾಡಬಹುದು ಎಂಬ ಬಗ್ಗೆ ವಿದ್ಯಾರ್ಥಿಗಳು ಓದಲಿದ್ದಾರೆ. ಈ ಮೂಲಕ ಗಂಗಾ ಸ್ವಚ್ಛತಾ ಅಭಿಯಾನಕ್ಕೆ ಹೊಸ ಆಯಾಮ ಕೊಟ್ಟಂತೆ ಆಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.