ಮದುವೆ ಮನೆಯಲ್ಲಿ ಜೋರಾಗಿ ಸಂಗೀತ ನುಡಿಸಿದ ಕಾರಣಕ್ಕೆ ಎರಡು ಮದುವೆಗಳನ್ನ ನಡೆಸಲು ಮೌಲ್ವಿ ನಿರಾಕರಿಸಿದ ಘಟನೆ ಉತ್ತರ ಪ್ರದೇಶದ ಕೈರಾನಾ ಎಂಬಲ್ಲಿ ನಡೆದಿದೆ. ಭಾನುವಾರ ಸಂಜೆ ಸುಮಾರಿಗೆ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೌಲ್ವಿ ಕ್ವಾರಿ ಸೂಫಿಯಾನಾ ಎಂಬವರು ವಧು -ವರರ ಕುಟುಂಬಸ್ಥರ ಬಳಿ ಆಝಾನ್ ಸಮಯವಾದ್ದರಿಂದ ಧ್ವನಿವರ್ಧಕಗಳಲ್ಲಿ ಹಾಕಲಾಗಿದ್ದ ಹಾಡುಗಳನ್ನ ಬಂದ್ ಮಾಡುವಂತೆ ಹೇಳಿದ್ದರು. ಆದರೆ ಕುಟುಂಬಸ್ಥರು ಮೌಲ್ವಿಯ ಈ ಮಾತಿಗೆ ತಲೆ ಬಾಗಿರಲಿಲ್ಲ. ಇದರಿಂದ ಕೋಪಗೊಂಡ ಮೌಲ್ವಿ ಮದುವೆ ನೆರವೇರಿಸೋದಿಲ್ಲ ಎಂದು ಹೇಳಿದ್ದಾರೆ.
ಇಬ್ಬರು ಸಹೋದರರು ಒಂದೇ ದಿನ ಇಬ್ಬರು ಸಹೋದರಿಯನ್ನ ವಿವಾಹವಾಗಿದ್ದರು. ಕಾರಿನ ಟಾಪ್ ಮೇಲೆ ನಿಂತು ವರರಿಬ್ಬರೂ ಅಬ್ಬರದ ಸಂಗೀತಕ್ಕೆ ನೃತ್ಯ ಮಾಡುತ್ತಿರೋದನ್ನ ನಾನೇ ನೋಡಿದ್ದೇನೆ. ನನ್ನ ಮಾತನ್ನ ಅವರು ಕೇಳದ ಹಿನ್ನೆಲೆ ಈ ಮದುವೆಯನ್ನ ನಡೆಸಲ್ಲ ಎಂದು ಮೌಲ್ವಿ ಹೇಳಿದ್ದಾರೆ.
ಮದುವೆಯ ಮೆರವಣಿಗೆ ದೆಹಲಿಯ ಜಾಗತ್ಪುರದಿಂದ ಬರುತ್ತಿತ್ತು. ಮೌಲ್ವಿ ಮದುವೆ ನಡೆಸಲು ನಿರಾಕರಿಸಿದ ಬಳಿಕ ಕುಟುಂಬಸ್ಥರು ಇನ್ನೊಂದು ಮೌಲ್ವಿಯನ್ನ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ. ಇದಾದ ಬಳಿಕ ಊರಿನಲ್ಲಿ ಪಂಚಾಯ್ತಿ ನಡೆಸಲಾಗಿದ್ದು ಮದುವೆ ನಡೆಸಲು ನಿರಾಕರಿಸಿದ ಮೌಲ್ವಿ ವಿರುದ್ಧ ಊರಿನ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ರು.
ಆದರೆ ದೊಡ್ಡದಾಗಿ ಸಂಗೀತ ನುಡಿಸೋದು ಹಾಗೂ ನೃತ್ಯ ಮಾಡೋದು ಇಸ್ಲಾಂ ಧರ್ಮಕ್ಕೆ ವಿರುದ್ಧವಾಗಿದೆ. ಹೀಗಾಗಿ ಜನರು ಇದರಿಂದ ಪಾಠ ಕಲಿಯಬೇಕು ಎಂದು ಮೌಲ್ವಿ ಹೇಳಿದ್ದಾರೆ.