ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಇತ್ತೀಚೆಗೆ ಗೃಹಸ್ಥಾಶ್ರಮ ಪ್ರವೇಶಿಸಿದ ಜೋಡಿಯೊಂದು ಸಾಕಷ್ಟು ಸುದ್ದಿಯಲ್ಲಿದೆ.
ಮದುವೆಗೆ ನಿಗದಿಯಾಗಿದ್ದ ವೇಳೆಗಿಂತ ಕೆಲವೇ ಕ್ಷಣಗಳ ಮುಂಚೆ ಸಂಭವಿಸಿದ ಅಪಘಾತದಲ್ಲಿ ಮದುಮಗಳು ಆರತಿಗೆ ಗಂಭೀರ ಗಾಯಗಳಾಗಿವೆ. ಮನೆಯ ಮಹಡಿಯ ಮೆಟ್ಟಿಲು ಇಳಿಯುವ ವೇಳೆ ಮಗುವೊಂದನ್ನು ರಕ್ಷಿಸಲು ಹೋಗಿ, ತಾನೇ ಕೆಳಗೆ ಬಿದ್ದ ಕಾರಣ ಆಕೆಗೆ ಬಲವಾದ ಗಾಯಗಳಾಗಿವೆ. ಆರತಿಗೆ ಈ ಘಟನೆಯಲ್ಲಿ ಸ್ಪೈನಲ್ ಕಾರ್ಡ್‌ಗೆ ಗಾಯವಾಗಿದ್ದು, ಭವಿಷ್ಯದಲ್ಲಿ ಆಕೆಗೆ ಅಂಗವೈಕಲ್ಯ ಬಾಧಿಸುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಆರತಿಗೆ ಸದ್ಯದ ಮಟ್ಟಿಗೆ ಕಾಲುಗಳನ್ನು ಅಲ್ಲಾಡಿಸಲು ಸಾಧ್ಯವಾಗದೇ ಇರುವ ಕಾರಣ ಆಕೆ ತಿಂಗಳುಗಳ ಮಟ್ಟಿಗೆ ಹಾಸಿಗೆಯಲ್ಲೇ ಇರಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಆದರೂ ಸಹ ಮದುಮಗ ಅವಧೇಶ್ ತನ್ನ ಭಾವೀ ಪತ್ನಿಯನ್ನು ಬಿಟ್ಟುಕೊಡಲು ಸಿದ್ಧವಿರಲಿಲ್ಲ. ನಿಗದಿತ ಮುಹೂರ್ತದಲ್ಲೇ ಆರತಿ ದಾಖಲಾಗಿದ್ದ ಆಸ್ಪತ್ರೆಯ ವಾರ್ಡ್‌ನಲ್ಲೇ ಆಕೆಯ ಕೈ ಹಿಡಿದು ಮಾನವೀಯತೆ ಮೆರೆದಿದ್ದಾರೆ ಅವಧೇಶ್.
“ಏನೇ ಆಗಿದ್ದರೂ ಅದು ಹಣೆಬರಹದಿಂದ ಆಗಿದೆ. ನಾನು ಆಕೆಯೊಂದಿಗೆ ಇದ್ದು, ಸಂಕಷ್ಟದ ಘಳಿಗೆಯಲ್ಲಿ ಆಕೆಯ ನೆರವಿಗೆ ನಿಲ್ಲಲಿದ್ದೇನೆ” ಎಂದು ಅವಧೇಶ್ ತಿಳಿಸಿದ್ದಾರೆ. ಮದುವೆ ಮಾಡಿಕೊಂಡ ಘಳಿಗೆಯಿಂದ ಒಂದೇ ಒಂದು ಕ್ಷಣವೂ ಸಹ ಆಸ್ಪತ್ರೆಯಿಂದ ಹೊರಗೆ ಬರದ ಅವಧೇಶ್, ಆಕೆಯ ನೆರವಿಗೆ ನಿಂತಿದ್ದಾರೆ.