ಕೊರೊನಾ ಕಾಲದಲ್ಲೂ ಗುರುಗ್ರಾಮದ ಮನೆ-ಮನೆಗಳಲ್ಲಿ ಕರೆಯದೆ ಬಂದ ಅತಿಥಿಗಳದ್ದೇ ಕಾರುಬಾರು ನಡೆದಿದೆ. ಕಳೆದ ಒಂದು ತಿಂಗಳ ಹಿಂದೆ ರಾಜಸ್ತಾನ, ಮಧ್ಯಪ್ರದೇಶ ಭಾಗದಲ್ಲಿ ಉಪಟಳ ಮಾಡಿದ ಬಳಿಕ ಮಾಯವಾಗಿದ್ದ ಹಸಿರು ಭಕ್ಷಕ ಮಿಡತೆಗಳು ಹರಿಯಾಣದ ಗುರುಗ್ರಾಮಕ್ಕೆ ದಾಂಗುಡಿ ಇಟ್ಟಿವೆ.
ಗಿಡ-ಮರಗಳಷ್ಟೇ ಅಲ್ಲದೆ, ಮನೆಗಳ ಮೇಲೂ ದಾಳಿ ನಡೆಸಿದ್ದು, ಕೈತೋಟ, ಹೂದೋಟಗಳನ್ನು ತಿಂದು ತೇಗುತ್ತಿವೆ. ಮನೆಯ ತಾರಸಿ, ಗೋಡೆ, ಕಿಟಕಿ, ಬಾಗಿಲುಗಳ ಮೇಲೆ ಕುಳಿತು ಇಣುಕಿ ನೋಡುವ ಮಿಡತೆಗಳ ಸಂಖ್ಯೆ ಒಂದು ಕ್ಷಣ ಭಯ ಹುಟ್ಟಿಸದೆ ಇರದು.
ಈಗಾಗಲೇ ಜಿಲ್ಲಾಡಳಿತದಿಂದ ಮಾರ್ಗಸೂಚಿ ಹೊರಬಿದ್ದಿದ್ದು, ಮನೆ ಬಿಟ್ಟು ಯಾರೂ ಹೊರಬರುವಂತಿಲ್ಲ. ಕಿಟಕಿ, ಬಾಗಿಲು ಮುಚ್ಚಿ, ಮಿಡತೆಗಳು ಅಲ್ಲೇ ವಾಸ್ತವ್ಯ ಹೂಡದಂತೆ ಶಬ್ದಗಳನ್ನು ಮಾಡಿ ಓಡಿಸಿ ಎಂದು ಸೂಚಿಸಿದೆ.
ರಾಷ್ಟ್ರ ರಾಜಧಾನಿ ದಿಲ್ಲಿಗೆ ನುಗ್ಗಲು ಭಾರೀ ದೂರವೇನಿಲ್ಲ. ಸಮಯವೂ ಬೇಕಿಲ್ಲ. ಯಾವಾಗ ಬೇಕಿದ್ದರೂ ಮಿಡತೆಗಳು ದಂಡು ಕಟ್ಟಿಕೊಂಡು ದಿಲ್ಲಿಗೆ ದಾಂಗುಡಿ ಇಡಬಹುದು.