ಉತ್ತರ ಪ್ರದೇಶದ ಉನ್ನಾವೋದಲ್ಲಿ ವ್ಯಕ್ತಿಯೊಬ್ಬನ ಹೊಟ್ಟೆಯಿಂದ 35 ಮೊಳೆ, ಸ್ಕ್ರೂ ಡ್ರೈವರ್, ಕಬ್ಬಿಣದ ತುಂಡು ಸೇರಿ 250 ಗ್ರಾಂ ಕಬ್ಬಿಣದ ವಸ್ತುಗಳನ್ನು ಹೊರ ತೆಗೆಯುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಚಂದ್ರ ಕುಸುಮ್ ಖಾಸಗಿ ಆಸ್ಪತ್ರೆಯ ತಜ್ಞ ವೈದ್ಯ ಡಾ. ಸಂತೋಷ್ ವರ್ಮಾ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ. ಹೊಟ್ಟೆ ನೋವಿನಿಂದ 4 ದಿನಗಳ ಹಿಂದೆ ಆಸ್ಪತ್ರೆಗೆ ಬಂದಿದ್ದ ಶುಕ್ಲಗಂಜ್ ಮೂಲದ ಯುವಕನನ್ನು ತಪಾಸಣೆಗೆ ಒಳಪಡಿಸಿದಾಗ ಮೊಳೆಗಳು ಸೇರಿದಂತೆ ಕಬ್ಬಿಣದ ವಸ್ತುಗಳು, ಮರಳು ಇರುವುದು ಕಂಡು ಬಂದಿದೆ. ಶಸ್ತ್ರಚಿಕಿತ್ಸೆ ನಂತರ ಅವುಗಳನ್ನು ಹೊರ ತೆಗೆಯಲಾಗಿದ್ದು ಆತ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಮೊಳೆ ಮತ್ತು ಕಬ್ಬಿಣದ ವಸ್ತುಗಳು ಆತನ ಹೊಟ್ಟೆ ಸೇರಿದ್ದು ಹೇಗೆ ಎಂಬುದರ ಕುರಿತಾಗಿ ಕುಟುಂಬದವರು ಸರಿಯಾಗಿ ಮಾಹಿತಿ ನೀಡಿಲ್ಲ. ಕಬ್ಬಿಣದ ಚೂಪಾದ ವಸ್ತುಗಳು, ಮೊಳೆ ಕರುಳು ಪ್ರವೇಶಿಸಿದ್ದರೆ ಕಷ್ಟ ಸಾಧ್ಯವಾಗುತ್ತಿತ್ತು ಎಂದು ಹೇಳಲಾಗಿದೆ.