ಲಾಕ್ ಡೌನ್ ವೇಳೆ ಸಂಪೂರ್ಣ ಬಂದ್ ಆಗಿದ್ದ ದೇಶ ನಂತ್ರ ನಿಧಾನವಾಗಿ ತೆರೆದುಕೊಳ್ತಿದೆ. ಅನ್ಲಾಕ್ 4ನಲ್ಲಿ ಸರ್ಕಾರ ಸಾಕಷ್ಟು ರಿಯಾಯಿತಿಗಳನ್ನು ನೀಡಿತ್ತು. ಈಗ ಅನ್ಲಾಕ್ 5 ನಲ್ಲಿ ಮತ್ತಷ್ಟು ರಿಯಾಯಿತಿ ಸಿಗುವ ಸಾಧ್ಯತೆಯಿದೆ. ಇಂದು ಅನ್ಲಾಕ್ 5.0 ಘೋಷಣೆಯಾಗುವ ಸಾಧ್ಯತೆಯಿದೆ. ಅಕ್ಟೋಬರ್ 30ರವರೆಗೆ ಈ ಅನ್ಲಾಕ್ 5.0 ಜಾರಿಯಲ್ಲಿರಲಿದೆ.
ಅಕ್ಟೋಬರ್ ನಲ್ಲಿ ಹಬ್ಬದ ಸರಣಿ ಶುರುವಾಗಲಿದೆ. ದಸರಾ, ದೀಪಾವಳಿ ಹೀಗೆ ದೇಶದಲ್ಲಿ ಹಬ್ಬಗಳ ಸರಣಿ ಶುರುವಾಗ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಅನ್ಲಾಕ್ 5ನಲ್ಲಿ ಮತ್ತಷ್ಟು ರಿಯಾಯಿತಿ ನೀಡಲಿದೆ ಎನ್ನಲಾಗ್ತಿದೆ.
ಸಾರ್ವಜನಿಕ ಸ್ಥಳಗಳಾದ ಮಾಲ್‌ಗಳು, ಸಲೂನ್‌ಗಳು, ರೆಸ್ಟೋರೆಂಟ್‌ಗಳು, ಜಿಮ್‌ಗಳನ್ನು ಈಗಾಗಲೇ ನಿರ್ಬಂಧಗಳೊಂದಿಗೆ ತೆರೆಯಲು ಅನುಮತಿಸಲಾಗಿದೆ. ಆದರೆ ಸಿನೆಮಾ ಹಾಲ್‌ಗಳು, ಈಜುಕೊಳಗಳು, ಮನರಂಜನಾ ಉದ್ಯಾನವನಗಳು ಇನ್ನೂ ತೆರೆದಿಲ್ಲ.ಅಕ್ಟೋಬರ್‌ನಿಂದ ಇವುಗಳನ್ನು ತೆರೆಯಲು ಅವಕಾಶ ನೀಡುವ ಸಾಧ್ಯತೆಯಿದೆ. ಮಲ್ಟಿಪ್ಲೆಕ್ಸ್ ಸಂಘ, ಮಾಲ್ ತೆರೆಯಲು ಅನುಮತಿ ನೀಡುವಂತೆ ಅನೇಕ ಬಾರಿ ಸರ್ಕಾರಕ್ಕೆ ಮನವಿ ಮಾಡಿದೆ.
ಪಶ್ಚಿಮ ಬಂಗಾಳ ಸರ್ಕಾರ ಅಕ್ಟೋಬರ್ 1 ರಿಂದ ಸೀಮಿತ ಸಂಖ್ಯೆಯ ಜನರು ಪ್ರವೇಶಿಸುವ ಸಿನೆಮಾ ಹಾಲ್‌ಗಳನ್ನು ತೆರೆಯಲು ಈಗಾಗಲೇ ಅನುಮತಿ ನೀಡಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಾತನಾಡಿ, ಸಣ್ಣ ಜಾತ್ರೆ, ನಾಟಕ, ಓಪನ್ ಏರ್ ಥಿಯೇಟರ್, ಸಿನೆಮಾ ಮತ್ತು ಎಲ್ಲಾ ಸಂಗೀತ, ನೃತ್ಯ, ಹಾಡುಗಾರಿಕೆ ಮತ್ತು ಮ್ಯಾಜಿಕ್ ಪ್ರದರ್ಶನಗಳನ್ನು ಅಕ್ಟೋಬರ್ 1 ರಿಂದ 50 ಅಥವಾ ಅದಕ್ಕಿಂತ ಕಡಿಮೆ ಜನರೊಂದಿಗೆ ತೆರೆಯಲಾಗುವುದು ಎಂದಿದ್ದಾರೆ.
ಕೊರೊನಾ ಕಾರಣಕ್ಕೆ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಅನ್ಲಾಕ್ 5ನಲ್ಲಿ ಪ್ರವಾಸೋದ್ಯಮ ಸ್ಥಳಗಳನ್ನು ತೆರೆಯಲು ಅನುಮತಿ ನೀಡುವ ಸಾಧ್ಯತೆಯಿದೆ. ಸಿಕ್ಕಿಂ ಸರ್ಕಾರವು ಅಕ್ಟೋಬರ್ 10 ರಿಂದ ಹೋಟೆಲ್‌ಗಳು, ಹೋಂ ಸ್ಟೇ ಮತ್ತು ಇತರ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಸೇವೆಗಳನ್ನು ಪ್ರಾರಂಭಿಸಲು ನಿರ್ಧರಿಸಿದೆ.