ನವದೆಹಲಿ: ನಿಗದಿಯಾಗಿರುವಂತೆಯೇ ವಿಶ್ವವಿದ್ಯಾನಿಲಯಗಳ ಅಂತಿಮ ಪದವಿ ಪರೀಕ್ಷೆಗಳು ನಡೆಯಲಿದೆ. ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ(ಯುಜಿಸಿ) ಗುರುವಾರ ಈ ಕುರಿತಾಗಿ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಜುಲೈ 6 ರ ಮಾರ್ಗಸೂಚಿಗಳನ್ನು ಬದಲಾಯಿಸುವುದಿಲ್ಲ. ಸೆಪ್ಟೆಂಬರ್ 30 ರೊಳಗೆ ಅಂತಿಮ ವರ್ಷದ ಪರೀಕ್ಷೆಗಳು ನಡೆಯಲಿವೆ. ಈ ಕುರಿತಾಗಿ ವಿಶ್ವವಿದ್ಯಾಲಯಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನು ರಕ್ಷಿಸಲು ಪರೀಕ್ಷೆ ನಡೆಸುವ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎಂದು ಯುಜಿಸಿ ಹೇಳಿದೆ. ಮನಸ್ಸಿಗೆ ಬಂದಂತೆ ಪರೀಕ್ಷೆ ನಡೆಸುವ ನಿರ್ಧಾರ ತೆಗೆದುಕೊಂಡಿಲ್ಲ. ತಜ್ಞರೊಂದಿಗೆ ಚರ್ಚಿಸಲಾಗಿದೆ ಎಂದು ಯುಜಿಸಿ ತಿಳಿಸಿದೆ.
ಅಂತಿಮ ವರ್ಷದ ಪರೀಕ್ಷೆಗಳು ಅನಿವಾರ್ಯವಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನದ ಪುರಾವೆ ನೀಡಲು ಇದೊಂದೇ ಮಾರ್ಗ ಎಂದು ಯುಜಿಸಿ ಹೇಳಿದ್ದು, ಜುಲೈ 31 ರ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಯಲಿದೆ.
ಕೋವಿಡ್ -19 ಬಿಕ್ಕಟ್ಟಿನ ಮಧ್ಯೆ ಅಂತಿಮ ವರ್ಷದ ಪರೀಕ್ಷೆಗಳನ್ನು ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಒಂದು ಡಜನ್ ಗೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ರದ್ದು ಕೋರಿ ಅರ್ಜಿ ಸಲ್ಲಿಸಿದ್ದರು. ಜುಲೈ 28 ರಂದು ಸುಪ್ರೀಂ ಕೋರ್ಟ್ ಯುಜಿಸಿಯಿಂದ ಪ್ರತಿಕ್ರಿಯೆ ಕೇಳಿದ್ದು, ಯುಜಿಸಿ ಅಫಿಡವಿಟ್ ಸಲ್ಲಿಸಿದೆ