ಉತ್ತರಾಖಂಡದ ಉಧಮ್ ಸಿಂಗ್ ನಗರದ ಹೆದ್ದಾರಿಯಲ್ಲಿ ಮೊಟ್ಟೆ ತುಂಬಿದ್ದ ಪಿಕಪ್ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ 50 ಸಾವಿರಕ್ಕೂ ಹೆಚ್ಚು ಮೊಟ್ಟೆಗಳು ನೆಲಕ್ಕುರುಳಿದೆ. ಮೊಟ್ಟೆ ನೋಡಿದ ಸ್ಥಳೀಯರು ಇದನ್ನು ಆರಿಸಲು ಮುಗಿ ಬಿದ್ದಿದ್ದಾರೆ.
ವೇಗವಾಗಿ ಬರ್ತಿದ್ದ ಕ್ಯಾಂಟರ್ ಗೆ ಪಿಕಪ್ ವಾಹನ ಡಿಕ್ಕಿ ಹೊಡೆದಿದೆ. ಇದ್ರಿಂದ ನಿಯಂತ್ರಣ ತಪ್ಪಿದ ಪಿಕಪ್ ವಾಹನ ಪಲ್ಟಿಯಾಗಿದೆ. ವಾಹನದಲ್ಲಿದ್ದ ಎಲ್ಲ ಮೊಟ್ಟೆ ರಸ್ತೆಗೆ ಬಿದ್ದಿದೆ. ರಸ್ತೆಯಲ್ಲಿ ಬಿದ್ದ ಒಡೆಯದ ಮೊಟ್ಟೆಗಳನ್ನು ದೋಚುವಲ್ಲಿ ಸ್ಥಳೀಯರು ನಿರತರಾಗಿದ್ದರು. ಸ್ಥಳಕ್ಕೆ ಪೊಲೀಸರು ಬರುವ ಮೊದಲೇ ಸ್ಥಳೀಯರು ಎಲ್ಲ ಮೊಟ್ಟೆಗಳನ್ನು ಹೊತ್ತೊಯ್ದಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಜನರನ್ನು ಚದುರಿಸುವುದು ದೊಡ್ಡ ಸವಾಲಾಗಿತ್ತು.
ಘಟನೆಯಲ್ಲಿ ಇಬ್ಬರಿಗೆ ಗಾಯವಾಗಿದೆ ಎನ್ನಲಾಗಿದೆ. ಗಾಯಾಳುಗಳನ್ನು ರಕ್ಷಿಸುವ ಬದಲು ಜನರು ಮೊಟ್ಟೆ ಆರಿಸುವಲ್ಲಿ ನಿರತರಾಗಿದ್ದ ಫೋಟೋ ವೈರಲ್ ಆಗಿದೆ. 5 ಲಕ್ಷ ಮೌಲ್ಯದ ಮೊಟ್ಟೆಯನ್ನು ಬೇಕರಿಯೊಂದಕ್ಕೆ ಡಿಲೆವರಿ ಮಾಡಬೇಕಾಗಿತ್ತು ಎನ್ನಲಾಗಿದೆ.