ದೆಹಲಿ ಗಡಿಯಲ್ಲಿ ಪ್ರತಿಭಟನೆಯಲ್ಲಿ ನಿರತರಾಗಿರುವ ಪಂಜಾಬ್-ಹರಿಯಾಣಾ ರೈತರ ದನಿಗೆ ಬಲ ಕೊಡುವ ಯತ್ನವೊಂದಕ್ಕೆ ಕೈ ಹಾಕಿರುವ ಸಹೋದರಿಯರಿಬ್ಬರ ಜೋಡಿಯೊಂದು ಅನ್ನದಾತರಿಗಾಗಿ ವಿಶೇಷ ಗಾಯನವೊಂದನ್ನು ಸಿದ್ಧಪಡಿಸಿದೆ.
“ಸುನ್ ದಿಲ್ಲಿಯೇ ನಿ ಸುನ್ ದಿಲ್ಲಿಯೇ” ಹೆಸರಿನ ಈ ಹಾಡು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಸಾವಿರಾರು ಹಿಟ್ಸ್ಗಳನ್ನು ಪಡೆದುಕೊಂಡಿದೆ. ನೆಟ್ಟಿಗರಿಂದ ಮೆಚ್ಚುಗೆಗೆ ಸಿಗುವುದಕ್ಕಿಂತಲೂ, ಅನ್ನದಾತರಿಗೆ ಇಷ್ಟವಾಗಿರುವುದು ಖುಷಿಯ ವಿಚಾರ ಎಂದು ಸಿಮ್ರಿತಾ ಹಾಗೂ ರಮ್ನೀಕ್ ಸಹೋದರಿಯರು ತಿಳಿಸಿದ್ದಾರೆ.
“ಈ ಹಾಡು ಇಷ್ಟೊಂದು ಜನಪ್ರಿಯವಾಗುತ್ತದೆ ಎಂದು ನಾವು ಭಾವಿಸಿರಲಿಲ್ಲ. ಪ್ರತಿಯೊಬ್ಬರು ಕೊಟ್ಟ ಫೀಡ್ಬ್ಯಾಕ್ ಹೃದಯ ಮುಟ್ಟುವಂತಿವೆ. ಆದರೆ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಂದಿ — ನಾಯಕರಿಂದ ಹಿಡಿದು ರೈತರವರೆಗೆ — ಸಹ ಈ ಹಾಡನ್ನು ಬಹಳ ಮೆಚ್ಚಿರುವುದು ಸಂತಸದ ವಿಚಾರ” ಎಂದು ಸಿಮ್ರಿತಾ ತಿಳಿಸಿದ್ದಾರೆ.
ಸಹೋದರಿಯರಿಬ್ಬರೂ ಹಿಂದೂಸ್ತಾನೀ ಶಾಸ್ತ್ರೀಯ ಸಂಗೀತದಲ್ಲಿ ಸ್ನಾತಕೋತ್ತರ ಪದವೀಧರೆಯರಾಗಿದ್ದಾರೆ.