ಕೊರೊನಾ ವೈರಸ್ನಿಂದ ಸಾವನ್ನಪ್ಪಿದರೆ ಮುಗೀತು. ಯಾವುದೇ ಧಾರ್ಮಿಕ ವಿಧಿ ವಿಧಾನ ಮಾಡೋದು ಹಾಗಿರಲಿ. ಮೃತ ವ್ಯಕ್ತಿಯ ಮುಖ ನೋಡೋಕೂ ಕೆಲವೊಮ್ಮೆ ಕುಟುಂಬಸ್ಥರಿಗೆ ಅವಕಾಶ ಸಿಗೋದಿಲ್ಲ. ಆದರೆ ತೆಲಂಗಾಣದಲ್ಲಿ ಇಬ್ಬರು ಮುಸ್ಲಿಂ ಸಹೋದರರು ಹಿಂದೂ ವ್ಯಕ್ತಿಯ ಮೃತದೇಹಕ್ಕೆ ಅಂತ್ಯಕ್ರಿಯೆ ನಡೆಸಿದ ಮಾನವೀಯ ಘಟನೆ ವರದಿಯಾಗಿದೆ.
ಕಟಪಲ್ಲಿ ಎಂಬ ಗ್ರಾಮದಲ್ಲಿ ಕೊರೊನಾ ವೈರಸ್ನಿಂದ ಬಲಿಯಾದ ಹಿಂದೂ ವ್ಯಕ್ತಿಯ ಅಂತ್ಯಕ್ರಿಯೆಯನ್ನ ಮುಸ್ಲಿಂ ಸಹೋದರರು ಮಾಡಿ ಮುಗಿಸಿದ್ದಾರೆ. ಮೃತ ವ್ಯಕ್ತಿಯ ಕುಟುಂಬಸ್ಥರು ಅಂತ್ಯಕ್ರಿಯೆಯಲ್ಲಿ ಭಾಗಿಯಾಗದೇ ಇರೋದ್ರಿಂದ ಮುಸ್ಲಿಂ ಸಹೋದರರೇ ಈ ಕಾರ್ಯ ಮಾಡಿ ಮುಗಿಸಿದ್ದಾರೆ.
ಮೊಘುಲಿಯಾ ಎಂಬ ಹೆಸರಿನ ವ್ಯಕ್ತಿ ಕೆಲ ದಿನಗಳ ಹಿಂದಷ್ಟೇ ಕೊರೊನಾ ಸೋಂಕಿಗೆ ಒಳಗಾಗಿದ್ದರು. ಇವರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು. ಆದರೆ ಮೊಘುಲಿಯಾ ಕುಟುಂಬಸ್ಥರು ಸೋಂಕಿತನ ಅಂತ್ಯಕ್ರಿಯೆ ಮಾಡಲು ನಿರಾಕರಿಸಿದ್ದಾರೆ.
ಕುಟುಂಬಸ್ಥರೇ ಕೈಬಿಟ್ಟ ಈ ಸಂದರ್ಭದಲ್ಲಿ ಶಫಿ ಹಾಗೂ ಅಲಿ ಸಹೋದರರು ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ. ಮೊಘುಲಿಯಾರ ರಕ್ತ ಸಂಬಂಧಿಗಳು ಅಲ್ಲದೇ ಇದ್ದರೂ ಸಹ ಆಂಬುಲೆನ್ಸ್ ಚಾಲಕರಾದ ಈ ಸಹೋದರರು ಮೃತದೇಹದ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಈ ಮಾನವೀಯ ಕಾರ್ಯದ ಮೂಲಕ ಮುಸ್ಲಿಂ ಸಹೋದರರು ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.