ಕೋಲ್ಕತಾ: ಭಾರತೀಯ ವಿವಾಹಾಕಾಂಕ್ಷಿಗಳು ತಮಗೆ ಸರಿ ಹೊಂದುವ ವಧು/ವರರ ಗುಣಗಳ ದೊಡ್ಡ ಪಟ್ಟಿಯನ್ನೇ ಹೊಂದಿರುತ್ತಾರೆ. ಜಾತಿ, ಗೋತ್ರ, ಅಂದ, ಚಂದ, ನೌಕರಿ, ಆಸ್ತಿ ಹೀಗೆ……ಪಟ್ಟಿ ಒಂದೆರಡಲ್ಲ. ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಮ್ಯಾಟ್ರಮನಿ ಜಾಹೀರಾತುಗಳಲ್ಲಿ ಇಂಥ ಬೇಡಿಕೆಗಳ ಉದಾಹರಣೆ ಸಿಗುತ್ತದೆ.
ಐಎಎಸ್ ಅಧಿಕಾರಿ ನಿತಿನ್ ಸಂಘ್ವಾನ್ ಎಂಬುವವರು ಪತ್ರಿಕೆಯೊಂದರಲ್ಲಿ ಪ್ರಕಟವಾದ ಮ್ಯಾಟ್ರಮನಿ ಜಾಹೀರಾತಿನ ತುಣುಕೊಂದನ್ನು ಟ್ವೀಟ್ ಮಾಡಿದ್ದಾರೆ. “ವಿವಾಹಾಕಾಂಕ್ಷಿ ವಧು/ವರರೇ ಇತ್ತ ಗಮನ ಕೊಡಿ ಮದುವೆ ಹೊಂದಾಣಿಕೆಯ ಮಾನದಂಡಗಳು ಬದಲಾಗಿವೆ” ಎಂಬ ಕ್ಯಾಪ್ಶನ್ ನೀಡಿದ್ದಾರೆ.
ಮೇಲ್ವರ್ಗದ ಬಂಗಾಳಿ ವಕೀಲನೊಬ್ಬ ತನಗೆ ಬೇಕಾದ ವಧುವಿನ ಬಗ್ಗೆ ನೀಡಿದ ಜಾಹೀರಾತು ಅದಾಗಿದೆ. ಅದರಲ್ಲಿ ವಧು, ಎತ್ತರವಾಗಿ, ತೆಳ್ಳಗೆ, ಬೆಳ್ಳಗೆ, ಸುಂದರವಾಗಿರಬೇಕು ಎಂದು ಬರೆಯಲಾಗಿದೆ. ಅದರ ಜತೆಗೆ ಕೊನೆಯಲ್ಲಿ ವಿಧಿಸಿದ ವಿಶೇಷ ಷರತ್ತು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ನಗು ಹುಟ್ಟಿಸಿದೆ. “ವಧು ಸೋಶಿಯಲ್ ಮೀಡಿಯಾಗೆ ಎಡಿಕ್ಟ್ ಆಗಿರಬಾರದು” ಎಂದು ವಕೀಲ ಜಾಹೀರಾತಿನಲ್ಲಿ ಕಂಡೀಶನ್ ವಿಧಿಸಿದ್ದಾನೆ.