ಪುಣೆ ಬಳಿಯ ಪಿಂಪ್ರಿ ಪ್ರದೇಶದಿಂದ ಕಳೆದ ಐದು ವರ್ಷಗಳಿಂದ ಮಿಸ್ಸಿಂಗ್ ಆಗಿದ್ದ ವ್ಯಕ್ತಿಯೊಬ್ಬ ಮುಂಬೈನ ನಾಲಾಸಪೋರಾ ಪ್ರದೇಶದಲ್ಲಿ ಸಿಕ್ಕಿದ್ದಾನೆ. ವಿಷಯ ಇರುವುದು ಅಲ್ಲಲ್ಲ. 26 ವರ್ಷದ ಈ ವ್ಯಕ್ತಿ ಪ್ರೇಮಪಾಶದಲ್ಲಿದ್ದು ಇದೀಗ ತನ್ನ ಮನದನ್ನೆಯನ್ನು ಹೀಗೆ ನಾಪತ್ತೆಯಾಗಿದ್ದ ವೇಳೆ ವಿವಾಹವಾಗಿದ್ದಾನೆ.
2015ರ ಆಗಸ್ಟ್ನಲ್ಲಿ ಮುಂಬೈನ ವಿರಾರ್ನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ಬಂದಿದ್ದ ಸೋಮನಾಥ್ (ಹೆಸರು ಬದಲಿಸಲಾಗಿದೆ) ಹಾಗೂ ಆತನ ತಾಯಿ ಬಳಿಕ ತಮ್ಮ ಮನೆಗೆ ಮರಳಲು ದಾದರ್ನಲ್ಲಿ ರೈಲೊಂದನ್ನು ಏರಿದ್ದಾರೆ. ಸೋಮನಾಥ್ ತಾಯಿ ಮಹಿಳೆಯರ ಕೋಚ್ನಲ್ಲಿ ಹತ್ತಿಕೊಂಡಿದ್ದಾರೆ. ಪಿಂಪ್ರಿಯಲ್ಲಿ ಇಳಿದ ತಾಯಿಗೆ ತನ್ನ ಮಗ ಸಿಗಲೇ ಇಲ್ಲ. ಎಷ್ಟು ಹುಡುಕಿದರೂ ಸಿಗದೇ ಹೋದಾಗ ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಳೆದ ವರ್ಷದಂದು ತನ್ನ ತಾಯಿಯನ್ನು ಸಂಪರ್ಕಿಸಿದ್ದ ಸೋಮನಾಥ್ ತಾನು ಕ್ಷೇಮವಾಗಿ ಇರುವುದಾಗಿ ತಿಳಿಸಿದ್ದ. ಈ ಸಂಪರ್ಕದ ಜಾಡು ಹಿಡಿದ ಪೊಲೀಸರು, ಸೋಮನಾಥ ಕರೆ ಮಾಡಿದ ದೂರವಾಣಿ ಸಂಖ್ಯೆಯ ಬೆನ್ನತ್ತಿದ್ದಾರೆ. ಆಗ ಸೋಮನಾಥ್ ನಾಲಾಸಪೋರಾದಲ್ಲಿರುವುದು ಕಂಡು ಬಂದಿದೆ.
ತನ್ನ ಪ್ರೇಯಸಿಯನ್ನು ವಿವಾಹವಾಗಲು ಹೀಗೆ ಮಾಡಿದ್ದಾಗಿ ಹೇಳಿರುವ ಸೋಮನಾಥ್, ಸದ್ಯ ತಾನು ನಾಲಾಸಪೋರಾದಲ್ಲಿಯೇ ಇರುವುದಾಗಿ ತಿಳಿಸಿದ್ದು, ಪಿಂಪ್ರಿಗೆ ಮರಳುವುದಿಲ್ಲ ಎಂದು ಹೇಳಿದ್ದಾನೆ.