
ರಿಪಬ್ಲಿಕ್ ಟಿವಿಯ ಕಾರ್ಯನಿರ್ವಾಹಕ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಪ್ರಸಾರ ವೀಕ್ಷಕರ ಸಂಶೋಧನಾ ಸಮಿತಿ (ಬಾರ್ಕ್) ಸಿಇಓ ಪಾರ್ಥೋ ದಾಸ್‌ಗುಪ್ತಾರ ನಡುವಿನ ವಾಟ್ಸಾಪ್ ಸಂಭಾಷಣೆ ಎಂದು ಹೇಳಲಾದ ತುಣುಕಿನ ಸ್ಕ್ರೀನ್‌ಶಾಟ್‌ಗಳನ್ನು ವಕೀಲ ಪ್ರಶಾಂತ್ ಭೂಷಣ್ ಶೇರ್ ಮಾಡಿಕೊಂಡಿದ್ದಾರೆ. ಟಿಆರ್‌ಪಿ ಹಗರಣದಲ್ಲಿ ಅರ್ನಬ್ ಹಾಗೂ ಪಾರ್ಥೋರ ಹೆಸರುಗಳು ಬಲವಾಗಿ ಕೇಳಿ ಬಂದಿವೆ.
“ಬಾರ್ಕ್ ಸಿಇಓ & ಅರ್ನಬ್ ಗೋಸ್ವಾಮಿ ನಡುವಿನ ವಾಟ್ಸಾಪ್ ಸಂವಹನದ ಲೀಕ್ ಆಗಿರುವ ಸ್ಕ್ರೀನ್‌ಶಾಟ್‌ಗಳು ಇವು. ಅಧಿಕಾರ ದಲ್ಲಾಳಿ ಆಗಿದ್ದುಕೊಂಡು ಮಾಧ್ಯಮದಲ್ಲಿ ತಮಗಿರುವ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡು, ಸರ್ಕಾರದೊಂದಿಗೆ ನಿಕಟತೆ ಹೊಂದಿದ್ದಲ್ಲದೇ ಹೇಗೆ ಅನೇಕ ಸಂಚುಗಳನ್ನು ರೂಪಿಸಲಾಗುತ್ತಿತ್ತು ಎಂದು ಇವು ತೋರುತ್ತವೆ. ಕಾನೂನು ಸುವ್ಯವಸ್ಥೆ ಇರುವ ಯಾವುದೇ ದೇಶದಲ್ಲೂ ಸಹ ಆತ ಸುದೀರ್ಘಾವಧಿಗೆ ಜೈಲು ಶಿಕ್ಷೆಗೆ ಒಳಗಾಗಬೇಕಿತ್ತು” ಎಂದು ಭೂಷಣ್ ತಮ್ಮ ಟ್ವಿಟರ್ ಖಾತೆಯಲ್ಲಿ ಹೇಳಿಕೊಂಡಿದ್ದಾರೆ.
ರಿಪಬ್ಲಿಕ್ ಚಾನೆಲ್ ಸೇರಿದಂತೆ ಅನೇಕ ಟಿವಿ ವಾಹಿನಿಗಳು ತಂತಮ್ಮ ಟಿಆರ್‌ಪಿ ಹೆಚ್ಚಿಸಿಕೊಳ್ಳಲು ವಾಮಮಾರ್ಗ ಹಿಡಿದಿವೆ ಎಂದು ಹಂಸಾ ರಿಸರ್ಚ್ ಸಮೂಹದ ಮೂಲಕ ಬಾರ್ಕ್ ಕಳೆದ ಅಕ್ಟೋಬರ್‌ನಲ್ಲಿ ದೂರು ದಾಖಲಿಸಿತ್ತು.
