ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ಪಕ್ಷದಿಂದ ಮತ್ತೊಬ್ಬ ನಾಯಕ ಹೊರನಡೆದಿದ್ದಾರೆ. ಈ ಬಾರಿ ಡೈಮಂಡ್ ಹಾರ್ಬರ್ ಕ್ಷೇತ್ರದಿಂದ 2 ಬಾರಿ ಚುನಾಯಿತರಾಗಿದ್ದ ದೀಪಕ್ ಹಲದರ್ ಪಕ್ಷ ತೊರೆಯವ ನಿರ್ಧಾರ ಕೈಗೊಂಡಿದ್ದಾರೆ.
ಜನರ ಅಭಿವೃದ್ಧಿಗಾಗಿ ಶ್ರಮಿಸಲು ನನಗೆ ಪಕ್ಷ ಯಾವುದೇ ಅವಕಾಶವನ್ನ ನೀಡಲಿಲ್ಲ ಎಂದು ದೀಪಕ್ ಆರೋಪಿಸಿದ್ದಾರೆ. ದೀಪಕ್ ಹಲದರ್ ಸಧ್ಯದಲ್ಲೇ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಕಳೆದ ಕೆಲ ದಿನಗಳಿಂದ ಅನೇಕ ಪಕ್ಷಗಳ ನಾಯಕರು ಬಿಜೆಪಿ ಕಡೆಗೆ ವಾಲುತ್ತಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್, ದೀಪಕ್ ಹಲದರ್ ಉತ್ತಮ ಪ್ರದರ್ಶನವನ್ನ ನೀಡಿರಲಿಲ್ಲ. ಹೀಗಾಗಿ ನಾವು ಅವರಿಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡಬಾರದು ಎಂದು ನಿರ್ಧರಿಸಿದ್ದೆವು. ಹೀಗಾಗಿ ದೀಪಕ್ ಪಕ್ಷ ತೊರೆದಿದ್ದರಿಂದ ಟಿಎಂಸಿಗೆ ಯಾವುದೇ ನಷ್ಟವಾಗಿಲ್ಲ ಎಂದು ಹೇಳಿದೆ. ಕಳೆದ ಕೆಲ ತಿಂಗಳಿನಿಂದ ಟಿಎಂಸಿಯ ಅನೇಕ ನಾಯಕರು ಒಂದಿಲ್ಲೊಂದು ಕಾರಣಗಳನ್ನೊಡ್ಡಿ ಪಕ್ಷ ತ್ಯಜಿಸುತ್ತಿದ್ದಾರೆ. ಇದರಲ್ಲಿ ಬಹುತೇಕ ಮಂದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.