ಮಾವಿನಹಣ್ಣನ್ನ ಕದ್ದಿದ್ದಾರೆ ಅಂತಾ ಶಂಕಿಸಿ ಇಬ್ಬರು ಯುವಕರಿಗೆ ಸಗಣಿಯನ್ನ ತಿನ್ನುವಂತೆ ಶಿಕ್ಷೆ ನೀಡಿದ ಅಮಾನವೀಯ ಘಟನೆ ತೆಲಂಗಾಣದ ಮಹಬೂಬ್ಬಾದ್ ಜಿಲ್ಲೆಯಲ್ಲಿ ನಡೆದಿದೆ.
15 ಹಾಗೂ 17 ವರ್ಷದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಸಗಣಿ ತಿನ್ನಲು ಒತ್ತಾಯಿಸಿದ ಆರೋಪದಡಿಯಲ್ಲಿ ಯುವಕರ ತಾಯಿ ನೀಡಿದ ದೂರನ್ನ ಆಧರಿಸಿ ಇಬ್ಬರನ್ನ ಬಂಧಿಸಲಾಗಿದೆ.
ಕಂಟಾಯ್ಪಲೆಮ್ ಎಂಬ ಗ್ರಾಮದಲ್ಲಿ ಗುರುವಾರ ಈ ಅಮಾನವೀಯ ಘಟನೆ ಸಂಭವಿಸಿದ್ದು ತಡವಾಗಿ ಬೆಳಕಿಗೆ ಬಂದಿದೆ. ಇಬ್ಬರು ಯುವಕರು ತಮ್ಮ ಸಾಕು ನಾಯಿಯನ್ನ ಹುಡುಕಿಕೊಂಡು ಮಾವಿನ ತೋಟಕ್ಕೆ ಹೋಗಿದ್ದರು.
ಆದರೆ ಇವರು ಮಾವಿನ ಹಣ್ಣನ್ನ ಕದಿಯಲು ಬಂದಿದ್ದಾರೆ ಎಂದು ಭಾವಿಸಿದ ಕಾವಲುಗಾರರು ಇವರನ್ನ ಕಟ್ಟಿಹಾಕಿ ಹಲ್ಲೆ ನಡೆಸಿದ್ದು ಮಾತ್ರವಲ್ಲದೇ ಸಗಣಿ ತಿನ್ನುವಂತೆ ಮಾಡಿದ್ದಾರೆ. ಆರೋಪಿಗಳಲ್ಲೊಬ್ಬ ಈ ದೃಶ್ಯವನ್ನ ವಿಡಿಯೋ ಮಾಡಿಕೊಂಡಿದ್ದಾನೆ.
ಇನ್ನು ಈ ಘಟನೆ ಬಳಿಕ ಯುವಕರ ತಾಯಿ ಪೊಲೀಸ್ ಠಾಣೆಯಲ್ಲಿ ದೂರನ್ನ ದಾಖಲಿಸಿದ್ದಾರೆ. ದೂರನ್ನ ಆಧರಿಸಿದ ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.