ಕೋವಿಡ್-19 ಸೋಂಕು ಹರಡದಂತೆ ನೋಡಿಕೊಳ್ಳಲು ಮಾಸ್ಕ್ ಧರಿಸುವುದನ್ನು ಬಿಟ್ಟು ಪೌರ ಸೇವಕರೊಂದಿಗೆ ವಾಗ್ವಾದಕ್ಕೆ ಇಳಿಯುವ ಮಂದಿಗೆ ವಿಶಿಷ್ಟ ಶಿಕ್ಷೆ ಕೊಡುವ ವ್ಯವಸ್ಥೆಯನ್ನು ಪಣಜಿ ಮೇಯರ್ ಉದಯ್ ಮಡ್ಕಾಯ್ಕರ್ ಮಾಡಿದ್ದಾರೆ.
ಮಾಸ್ಕ್ ಧರಿಸದ ಪ್ರವಾಸಿಗರ ಚಿತ್ರಗಳನ್ನು ತೆರೆದು ಅವರಿಗೆ ದಂಡ ವಿಧಿಸಲಾಗುವುದು ಎಂದ ಮಡ್ಕಾಯ್ಕರ್, ತಮ್ಮ ಕರ್ತವ್ಯ ಮಾಡುತ್ತಿದ್ದ ಪಣಜಿ ಮುನ್ಸಿಪಾಲ್ ಕಾರ್ಪೋರೇಷನ್ ಅಧಿಕಾರಿಗಳ ಮೇಲೆ ಒಂದಷ್ಟು ಪ್ರವಾಸಿಗರು ವಾಕ್ಸಮರ ನಡೆಸಿದ ಬಳಿಕ ಈ ಕ್ರಮ ತೆಗೆದುಕೊಳ್ಳುವ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ.
“ಇಂಥ ವಿಷಮ ಸಂದರ್ಭಗಳು ಘಟಿಸಿದ ಬಳಿಕ ನಮ್ಮ ಪೊಲೀಸರು ಪಾಲಿಕೆ ಅಧಿಕಾರಿಗಳೊಂದಿಗೆ ಇರಲಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದನ್ನು ಖಾತ್ರಿ ಪಡಿಸಲಿದ್ದಾರೆ. ನಿಯಮ ಪಾಲನೆ ಮಾಡದೇ ಇರುವ ಪ್ರವಾಸಿಗರ ಚಿತ್ರಗಳನ್ನು ತೆಗೆದುಕೊಂಡು ನಂತರ ಅವರಿಗೆ ದಂಡ ಹಾಕಲಾಗುತ್ತದೆ. ನಮಗೆ ಜನರನ್ನು ಕಿರಿಕಿರಿ ಮಾಡುವುದು ಇಷ್ಟವಿಲ್ಲ. ಆದರೆ ಕೆಲವೊಂದು ಪ್ರವಾಸಿಗರು ನಮ್ಮ ಕರ್ತವ್ಯ ಮಾಡಲು ಅವಕಾಶ ಕೊಡುವುದಿಲ್ಲ. ಇದು ದೇಶಾದ್ಯಂತ ಇರುವ ನಿಯಮ. ಜನ ಗೋವಾಗೆ ಭೇಟಿ ಕೊಡಬೇಕು. ಆದರೆ ಇಲ್ಲಿನ ಜನರನ್ನು ಅವರು ಬೇಕಾಬಿಟ್ಟಿಯಾಗಿ ಪರಿಗಣಿಸಬಾರದು. ಮಾಸ್ಕ್ ಹಾಕುವ ಉದ್ದೇಶವೇನೆಂದರೆ, ಕೊರೋನಾ ವೈರಸ್‌ನಿಂದ ಪ್ರತಿಯೊಬ್ಬರನ್ನೂ ಸುರಕ್ಷಿತವಾಗಿ ಇಡುವುದು” ಎಂದು ಮಾಡ್ಕಾಯ್ಕರ್ ತಿಳಿಸಿದ್ದಾರೆ.