ದೇಶದಲ್ಲಿ ಕೊರೊನಾ 2ನೆ ಅಲೆ ಮೀತಿಮೀರಿದ್ದು ವೈದ್ಯಲೋಕಕ್ಕೆ ಸೋಂಕಿತರನ್ನ ಬಚಾವು ಮಾಡೋದೇ ಒಂದು ದೊಡ್ಡ ಸವಾಲಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋದಿಂದ ಕೇವಲ 40 ಕಿ.ಮೀ ದೂರದಲ್ಲಿರುವ ಉನ್ನಾವೋದಲ್ಲಿ 14 ಮಂದಿ ಸರ್ಕಾರಿ ವೈದ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಕೋವಿಡ್ ಕೇಸ್ಗಳಿಗೆ ತಮ್ಮನ್ನೇ ಬಲಿಪಶು ಮಾಡ್ತಿರೋದ್ರಿಂದ ಬೇಸತ್ತು ವೈದ್ಯರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಉನ್ನಾವೋದಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಕೇಂದ್ರಗಳಲ್ಲಿನ ಉಸ್ತುವಾರಿಯನ್ನ ಈ ವೈದ್ಯರು ವಹಿಸಿಕೊಂಡಿದ್ದರು.
ಇವೆರೆಡೂ ಆಸ್ಪತ್ರೆಗಳು ಗ್ರಾಮೀಣ ಪ್ರದೇಶದಲ್ಲಿದ್ದು ರೋಗಿಗಳಿಗೆ ಚಿಕಿತ್ಸೆ ನೀಡುವ ಕೆಲಸ ಮಾಡ್ತಿದೆ.
14 ಮಂದಿ ವೈದ್ಯರಲ್ಲಿ 11 ಮಂದಿ ವೈದ್ಯರು ಸರಣಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದಾರೆ. ಹಾಗೂ ಈ ಪತ್ರವನ್ನ ಉನ್ನಾವೋದ ವೈದ್ಯಕೀಯ ಇಲಾಖೆ ಮುಖ್ಯಸ್ಥರಿಗೆ ರವಾನಿಸಿದ್ದಾರೆ. ಈ ಪತ್ರದಲ್ಲಿ ಕೊರೊನಾದಂತಹ ಸಂಕಷ್ಟದ ಸನ್ನಿವೇಶದಲ್ಲಿ ಪರಿಶ್ರಮದಿಂದ ಕೆಲಸ ಮಾಡಿದ್ರೂ ಸಹ ನಮ್ಮ ವಿರುದ್ಧ ಹಿರಿಯ ಅಧಿಕಾರಿಗಳು ದುರ್ವತನೆ ತೋರಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ಈ ಸಂಬಂಧ ಉನ್ನಾವೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಹೊಸ ಹೇಳಿಕೆಯೊಂದನ್ನ ಬಿಡುಗಡೆ ಮಾಡಿದ್ದು ವಿವಾದ ಬಗೆಹರಿದಿದ್ದು ವೈದ್ಯರು ತಮ್ಮ ರಾಜೀನಾಮೆ ಪತ್ರವನ್ನ ಹಿಂಪಡೆದಿದ್ದಾರೆ ಎಂದು ಹೇಳಿದ್ದಾರೆ. ನಿನ್ನೆ ಸಂಜೆಯೇ ನಾವು ವೈದ್ಯರ ಬಳಿ ಮಾತನಾಡಿದ್ದೆವು. ರಾತ್ರಿ ವೇಳೆ ಅವರು ತಮ್ಮ ರಾಜೀನಾಮೆಯನ್ನ ಹಿಂಪಡೆದಿದ್ದಾರೆ. ಅವರೆಲ್ಲ ಇಂದು ನನ್ನನ್ನ ಭೇಟಿಯಾಗಿದ್ದಾರೆ. ಅವರ ಎಲ್ಲಾ ಸಮಸ್ಯೆಗಳನ್ನ ಆಲಿಸಿ ಅದಕ್ಕೆ ಸೂಕ್ತ ಪರಿಹಾರವನ್ನ ನೀಡುವ ಭರವಸೆ ನೀಡಿದ್ದೇನೆ. ಇದೊಂದು ಆಂತರಿಕ ವಿಚಾರವಾಗಿದೆ ಎಂದು ಹೇಳಿದ್ರು.
ಇನ್ನು ಈ ವಿಚಾರವಾಗಿ ಮಾತನಾಡಿದ ರಾಜೀನಾಮೆ ನೀಡಿದ್ದ ವೈದ್ಯ ಡಾ. ಶರದ್, ನಾವು ದಿನಂಪೂರ್ತಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೂ ಸಹ ನಾವು ಕೆಲಸ ಮಾಡುತ್ತಿಲ್ಲ ಎಂಬ ಅಪವಾದ ಕೇಳಿ ಬರ್ತಿದೆ. ಡಿಎಂ, ತಹಶೀಲ್ದಾರ್ ಸೇರಿದಂತೆ ವಿವಿಧ ಸರ್ಕಾರಿ ಅಧಿಕಾರಿಗಳು ನಮ್ಮ ಮೇಲೆ ಕಣ್ಣಿಟ್ಟಿದ್ದು ಸಭೆಗಳನ್ನ ನಡೆಸುತ್ತಲೇ ಇರ್ತಾರೆ. ನಮ್ಮ ತಂಡ ಕೋವಿಡ್ ಪಾಸಿಟಿವ್ ರೋಗಿಗಳನ್ನ ಐಸೋಲೇಟ್ ಮಾಡೋದು, ಮೆಡಿಸಿನ್ಗಳನ್ನ ನೀಡೋದು ಹೀಗೆ ಎಲ್ಲವನ್ನ ಮಾಡಿದ ಬಳಿಕ ನಮಗೆ ಸಭೆಗೆ ಬನ್ನಿ ಎಂದು ಹೇಳಲಾಗುತ್ತೆ. ಕೆಲವೊಮ್ಮೆ ಈ ಮೀಟಿಂಗ್ಗಳು 30 ಕಿಲೋಮೀಟರ್ ದೂರದ ಪ್ರದೇಶದಲ್ಲಿ ಆಯೋಜನೆಗೊಂಡಿರುತ್ತೆ. ನಾವು ಕೆಲಸ ಮಾಡದ ಕಾರಣಕ್ಕೆ ಕೋವಿಡ್ ಸೋಂಕು ಹೆಚ್ಚಾಗಿದೆ ಎಂದು ನಮ್ಮ ಮೇಲೆ ಆರೋಪ ಹೊರಿಸಲಾಗುತ್ತಿತ್ತು ಎಂದು ಹೇಳಿದ್ರು.