ಹಸುಗಳ ಪ್ರಾಮುಖ್ಯತೆ ಬಗ್ಗೆ ಜನರಿಗೆ ಮನದಟ್ಟು ಮಾಡಿಕೊಡುವ ಸಲುವಾಗಿ ಹಾಗೂ ಗೋವಿನ ಪಾಲನೆ, ರಕ್ಷಣೆ ಬಗ್ಗೆ ಅರಿತುಕೊಳ್ಳುವ ಸಲುವಾಗಿ ಮುಂದಿನ ತಿಂಗಳು ಗೋ ವಿಜ್ಞಾನದ ಬಗ್ಗೆ ರಾಷ್ಟ್ರವ್ಯಾಪಿ ಸ್ವಯಂ ಪ್ರೇರಿತ ಆನ್ಲೈನ್ ಪರೀಕ್ಷೆಯನ್ನ ನಡೆಸಲು ಸಿದ್ಧತೆ ನಡೆಸಲಾಗಿದೆ.
ಇನ್ನು ಈ ವಿಚಾರವಾಗಿ ಮಾತನಾಡಿದ ರಾಷ್ಟ್ರೀಯ ಕಾಮಧೇನು ಆಯೋಗದ ಅಧ್ಯಕ್ಷ ವಲ್ಲಭಬಾಯಿ ಕಥಾರಿಯಾ ಫೆಬ್ರವರಿ 25ರಂದು ಕಾಮಧೇನು ಗೋ ವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ. ಗೋ ಸಂತತಿ ರಕ್ಷಣೆ ಹಾಗೂ ಗೋವಿನ ಉತ್ಪನ್ನಗಳ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಕಾಮಧೇನು ಆಯೋಗವನ್ನ ರಚನೆ ಮಾಡಿದೆ.
ಪರೀಕ್ಷೆ ಬಗ್ಗೆ ಮಾಹಿತಿ ನೀಡಿದ ವಲ್ಲಭಬಾಯಿ ಕಠಾರಿಯಾ, ನಾಲ್ಕು ವಿಭಾಗಗಳಲ್ಲಿ ಗೋ ವಿಜ್ಞಾನದ ಪರೀಕ್ಷೆ ನಡೆಯಲಿದೆ. ಪ್ರಾಥಮಿಕ ಹಂತದಲ್ಲಿ 8ನೇ ತರಗತಿ ಒಳಗಿನ ವಿದ್ಯಾರ್ಥಿಗಳಿಗೆ, 9 ರಿಂದ 12ನೇ ತರಗತಿ ಮಕ್ಕಳಿಗೆ 2ನೇ ಹಂತ, ಕಾಲೇಜು ಹಾಗೂ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಮೂರನೇ ಹಂತ ಮತ್ತು ನಾಲ್ಕನೇ ಹಂತದ ಪರೀಕ್ಷೆಯನ್ನ ಯಾರು ಬೇಕಿದ್ದರೂ ಎದುರಿಸಬಹುದು ಎಂದು ಹೇಳಿದ್ದಾರೆ. ಕಾಮಧೇನು ಆಯೋಗದ ವೆಬ್ಸೈಟ್ನಲ್ಲೇ ಪರೀಕ್ಷೆ ಫಲಿತಾಂಶ ದೊರೆಯಲಿದೆ. ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರವನ್ನ ನೀಡಲಾಗುತ್ತೆ.
ಬಹು ಆಯ್ಕೆಯ ಪ್ರಶ್ನೆಗಳನ್ನ ಹೊಂದಿರುವ ಪರೀಕ್ಷೆ ಇದಾಗಿದ್ದು 1 ಗಂಟೆ ಅವಧಿಯಲ್ಲಿ ಅಭ್ಯರ್ಥಿಗಳು ಮೊಬೈಲ್ ಇಲ್ಲವೇ ಕಂಪ್ಯೂಟರ್ ಬಳಸಿ ಪರೀಕ್ಷೆ ಎದುರಿಸಬಹುದು. ಈ ಪರೀಕ್ಷೆಯನ್ನ ಬರೆಯಲು ಇಚ್ಚಿಸುವವರು ಜನವರಿ 14ರಿಂದ 20ನೇ ತಾರೀಖಿನೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಹಿಂದಿ, ಇಂಗ್ಲೀಷ್ ಹಾಗೂ 12 ಪ್ರಾದೇಶಿಕ ಭಾಷೆಗಳಲ್ಲಿ ಈ ಪರೀಕ್ಷೆ ನಡೆಯಲಿದೆ ಎಂದು ಕಠಾರಿಯಾ ತಿಳಿಸಿದ್ದಾರೆ.
ಹಸುಗಳ ಸಂತತಿ ಹಾಗೂ ಅವುಗಳ ಪ್ರಯೋಜನಗಳ ಬಗ್ಗೆ ದೇಶಾದ್ಯಂತ ಆಸಕ್ತಿ ಮೂಡಿಸುವ ಸಲುವಾಗಿ ಪ್ರತಿ ವಿಶ್ವ ವಿದ್ಯಾಲಯಗಳಲ್ಲಿ ಕಾಮಧೇನು ಪೀಠಗಳನ್ನ ಸ್ಥಾಪಿಸಲಾಗುತ್ತೆ ಎಂದು ಹೇಳಿದ್ದಾರೆ.