ತಮಿಳುನಾಡು ಬೋರ್ಡ್ ಪರೀಕ್ಷೆಯಲ್ಲಿ ಟಾಪರ್ ಆಗಿರುವ ಜೀವಿತ್ ಕುಮಾರ್ ಈ ಬಾರಿಯ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದರೂ ಸಹ ವೈದ್ಯಕೀಯ ಕಾಲೇಜಿಗೆ ದಾಖಲಾಗಲು ಸಾಕಷ್ಟು ಹಣ ಹೊಂದಿಸಲು ಪರದಾಡುತ್ತಿದ್ದಾರೆ.
ಜೀವಿತ್ ತಾಯಿ ಬಟ್ಟೆ ಹೊಲೆಯುತ್ತಿದ್ದರೆ ತಂದೆ ಶೆಪರ್ಡ್ ಆಗಿ ಕೆಲಸ ಮಾಡುತ್ತಾರೆ. ತಮ್ಮ ಮಗನ ವೈದ್ಯಕೀಯ ಶಿಕ್ಷಣದ ವೆಚ್ಚ ಭರಿಸಲು ಇಬ್ಬರ ಕೈಯಲ್ಲೂ ಸಾಕಷ್ಟು ಹಣವಿಲ್ಲ. “ಸರ್ಕಾರಿ ವೈದ್ಯಕೀಯ ಕಾಲೇಜಿನ ಶುಲ್ಕವನ್ನು ಭರಿಸಲೂ ಸಹ ನನ್ನ ಕುಟುಂಬ ಅಶಕ್ತವಾಗಿರುವ ಕಾರಣ ಆತನ ಮುಂದಿನ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ನನಗೆ ಸಹಾಯ ಬೇಕು” ಎಂದು ವಿದ್ಯಾರ್ಥಿ ಜೀವಿತ್ ತಿಳಿಸಿದ್ದಾರೆ.
ರಾಜ್ಯ ಮಟ್ಟದಲ್ಲಿ ಟಾಪರ್ ಆದರೂ ಸಹ ಮೊದಲ ಪ್ರಯತ್ನದಲ್ಲಿ ನೀಟ್ ಸ್ಕೋರ್ ಸಾಲದೇ ಇದ್ದ ಕಾರಣ, ಪ್ರೀ-ಮೆಡಿಕಲ್ ಕೋಚಿಂಗ್ ಪಡೆದುಕೊಂಡು ಈ ಬಾರಿ ಉತ್ತೀರ್ಣನಾಗಿದ್ದಾನೆ ಜೀವಿತ್.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿದವರಿಗಾಗಿ ತಮಿಳುನಾಡಿನಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲಿ 7.5%ನಷ್ಟು ಸೀಟುಗಳನ್ನು ಮೀಸಲಿಡುವ ಮಹತ್ವದ ಮಸೂದೆಯೊಂದಕ್ಕೆ ರಾಜ್ಯಪಾಲ ಬನ್ವರಿಲಾಲ್ ಪುರೋಹಿತ್ರ ಅಂಕಿತ ಬೀಳುವುದು ಬಾಕಿ ಇದೆ. ಹಾಗೆ ಆದಲ್ಲಿ ಸರ್ಕಾರಿ ಶಾಲೆಗಳಲ್ಲಿ ಓದಿದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲಿದ್ದಾರೆ.