
ಅಕಸ್ಮಾತ್ ಕಣ್ಣಿಗೆ ಹುಲಿಯೋ, ಚಿರತೆಯೋ, ಆನೆಯ ಹಿಂಡೋ ಕಾಣುತ್ತದೆ. ಆದರದು ಬಹುದೂರದ ಪೊದೆಯಲ್ಲೋ, ಮರದ ಮರೆಯಲ್ಲೋ ಇದೆಯಲ್ಲ ಎಂದುಕೊಂಡು ಅದರ ಫೋಟೋ, ವಿಡಿಯೋ ಮಾಡಲು ಅಣಿಯಾಗುತ್ತೀರಿ. ಅಷ್ಟರಲ್ಲಿ ಅದೇ ವ್ಯಾಘ್ರ ನಿಮ್ಮೆದುರು ಜಿಗಿದು ನಿಂತರೆ ಏನಾಗುತ್ತದೆ. ಜೀವ ಬಾಯಿಗೆ ಬಂದಂತಾಗುವುದಿಲ್ಲವೇ ?
ರಾಜಸ್ಥಾನದ ರಣತಂಬೂರು ಅರಣ್ಯ ಪ್ರದೇಶದಲ್ಲಿ ಸಫಾರಿ ಮಾಡುತ್ತಿದ್ದ ವೇಳೆ ಇಂತಹುದೇ ಪ್ರಸಂಗ ನಡೆದಿದ್ದು, ಪೊದೆಯಲ್ಲಡಗಿದ್ದ ಹುಲಿಯೊಂದು ಪ್ರವಾಸಿಗರೆದುರು ಧುತ್ತನೆ ಹಾರಿ ಕಾಂಪೌಂಡ್ ಗೋಡೆ ಮೇಲೆ ನಿಲ್ಲುತ್ತದೆ.
ಸಫಾರಿ ವಾಹನದಲ್ಲಿದ್ದ ಪ್ರವಾಸಿಗರು ಒಮ್ಮೆಲೆ ಚೀರುತ್ತಾರೆ. ಅದನ್ನು ವಿಡಿಯೋ ಮಾಡುತ್ತಿದ್ದವನೂ ಹೆದರಿ ಹೋಗುತ್ತಾನೆ. ಅರಣ್ಯಾಧಿಕಾರಿ ಸುಸಾಂತಾ ನಂದ ಟ್ವೀಟ್ ಮಾಡಿರುವ ಈ ವಿಡಿಯೋ, ವೈರಲ್ ಆಗಿದೆ.
ಹುಲಿಯನ್ನ ಕೆಣಕಿದವರನ್ನು ಮೂರ್ಖರು ಎಂದಿರುವ ಸುಸಾಂತ್, ಮನುಷ್ಯನ ಬುದ್ಧಿ ಕೆಲಸ ಮಾಡದಿದ್ದಾಗ, ಬಾಯಿ ಕೆಲಸ ಮಾಡುತ್ತದೆ. ಸಿಟ್ಟನ್ನು ನಿಯಂತ್ರಿಸಿಕೊಂಡ ಹುಲಿಯನ್ನು ಹೊಗಳಿರುವ ಅವರು, ಭವಿಷ್ಯದಲ್ಲಿ ಯಾವಾಗಲೂ ಹೀಗೇ ಇರುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ಕೊಟ್ಟಿದ್ದಾರೆ.