ಕೋಲ್ಕತ್ತಾದ ಜೋರಾಬಗನ್ನ ಪಾಳುಬಿದ್ದ ಕಟ್ಟಡವೊಂದರಲ್ಲಿ 8 ವರ್ಷದ ಬಾಲಕಿಯನ್ನ ಅಮಾನುಷವಾಗಿ ಕೊಲೆಗೈದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಬುಧವಾರ ಮಾವನ ಮನೆಗೆ ತೆರಳಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಮಾವನ ಮನೆಯ ಸಮೀಪದಲ್ಲೇ ಇರುವ ಕಟ್ಟಡದಲ್ಲಿ ಈಕೆ ಶವ ಸಿಕ್ಕಿದೆ.
ಬುಧವಾರ ರಾತ್ರಿ ಬಾಲಕಿ ನಾಪತ್ತೆಯಾಗಿದ್ದಾಳೆ ಎಂಬ ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಗುರುವಾರ ಅರ್ಧಂಬರ್ಧ ನಿರ್ಮಿಸಿ ಹಾಗೆಯೇ ಬಿಡಲಾದ ಕಟ್ಟಡದಲ್ಲಿ ಈಕೆಯ ಶವ ಪತ್ತೆಯಾಗಿದೆ. ಮೈಮೇಲೆ ಭಾಗಶಃ ಬಟ್ಟೆ, ಸೀಳಿದ ಗಂಟಲು, ಮುರಿದ ಹಲ್ಲು ಹಾಗೂ ಆಕೆಯ ಕೂದಲು ಕೆದರಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದಂತೆ ಕಂಡು ಬಂದಿದೆ. ಬಹುಶಃ ಬಾಲಕಿಯ ಪರಿಚಯಸ್ಥರೇ ಯಾರೋ ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮೃತದೇಹದ ಸುತ್ತ ಲಭ್ಯವಾದ ರಕ್ತಸಿಕ್ತವಾದ ಚಾಕು, ಆಕೆಯ ಮುರಿದ ನಾಲ್ಕು ಹಲ್ಲು, ಆಕೆಯ ಕೂದಲುಗಳನ್ನ ನೋಡ್ತಾ ಇದ್ದರೆ ಆಕೆ ಕೊಲೆಯಾಗೋದಕ್ಕೂ ಮುನ್ನ ಆರೋಪಿಗಳಿಂದ ಬಚಾವಾಗಲು ಹೋರಾಡಿದ್ದಾಳೆ ಅನ್ನೋದು ತಿಳಿಯುತ್ತೆ ಎಂದು ಪೊಲೀಸರು ಹೇಳಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿರೋದು ಸಾಬೀತಾದಲ್ಲಿ, ಆಕೆ ಬಹುಶಃ ಆಕೆಯ ಪರಿಚಯಸ್ಥರಿಂದಲೇ ಕೊಲೆಯಾಗಿರುತ್ತಾಳೆ. ಆಕೆ ಬದುಕಿದ್ದರೆ ಆರೋಪಿಗಳ ಹೆಸರನ್ನ ಹೇಳ್ತಾಳೆ ಎಂಬ ಕಾರಣಕ್ಕೇ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಬಾಲಕಿ ತನ್ನ ಅಜ್ಜಿಯನ್ನ ಭೇಟಿಯಾಗೋಕೆ ಬುಧವಾರ ಇಲ್ಲಿಗೆ ಬಂದಿದ್ದಳು. ಹಾಗೂ ಮೃತ ಬಾಲಕಿ ಬುಧವಾರ ರಾತ್ರಿ 8 ಗಂಟೆಯಿಂದ ನಾಪತ್ತೆಯಾಗಿದ್ದಾಳೆ ಎಂದು ಬಾಲಕಿಯ ಅತ್ತೆ ಹೇಳಿದ್ದಾರೆ. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ ಪೊಲೀಸರು ಶವವನ್ನ ಪತ್ತೆ ಮಾಡಿದ್ದಾರೆ.
ಟ್ವೀಟ್ ಮೂಲಕ ಘಟನೆಯ ಬಗ್ಗೆ ಖಂಡನೆ ವ್ಯಕ್ತಪಡಿಸಿದ ಬಿಜೆಪಿ ಮುಖಂಡ ಅಮಿತ್ ಮಾಲ್ವಿಯಾ, ಸ್ತ್ರೀಯರ ಮೇಲಿನ ಅಪರಾಧ ಹೆಚ್ಚಾಗುತ್ತಿರೋದು ಕಳವಳಕಾರಿ ವಿಚಾರವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.