ಚೆನ್ನೈನ ಬೀಚ್ ಬಳಿ ಯುವತಿಯೊಂದಿಗೆ ಲೈಂಗಿಕತೆ ಕುರಿತು ನಡೆಸಿದ ಅಸಭ್ಯ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕಾಗಿ ಮೂವರು ಯೂಟ್ಯೂಬರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚೆನ್ನೈ ಟಾಕ್ಸ್ ಯೂಟ್ಯೂಬ್ ಚಾನಲ್ ಖಾತೆದಾರ ದಿನೇಶ್ (31), ವಿಜೆ ಅಸೇನ್ ಬಾದಶಾ (23), ಕ್ಯಾಮರಾಮೆನ್ ಅಜಯ್ ಬಾಬು (24) ಬಂಧಿತ ಯೂಟ್ಯೂಬರ್ ಗಳು.
ಬೀಚ್ ಬಳಿ ಯುವತಿಯೊಬ್ಬಳನ್ನು ನಿಲ್ಲಿಸಿಕೊಂಡು ಲೈಂಗಿಕತೆ ಬಗ್ಗೆ ಅಶ್ಲೀಲ ಸಂದರ್ಶನ ಮಾಡಿದ್ದೂ ಅಲ್ಲದೆ, ಆಕೆಯ ಲೈಂಗಿಕ ಅನುಭವಗಳನ್ನು ಸಾರ್ವಜನಿಕವಾಗಿ ಬಿತ್ತರಿಸಲಾಗಿದೆ. ಈ ವಿಡಿಯೋ ಮಿಂಚಿನಂತೆ ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಾಗರಿಕರು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಯುವತಿ ನೀಡಿದ ದೂರು ಆಧರಿಸಿ ಶಾಸ್ತ್ರಿ ನಗರ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಐಪಿಸಿ ಸೆಕ್ಷನ್ 294(ಬಿ), 354(ಬಿ), 509 ರ ಅನ್ವಯ ಪ್ರಕರಣ ದಾಖಲಿಸಿ, ಬಂಧಿತರಿಂದ ನಾಲ್ಕು ಸ್ಮಾರ್ಟ್ ಫೋನ್, 1 ಮೈಕ್ರೋಫೋನ್, 1 ಕ್ಯಾಮರಾ ವಶಪಡಿಸಿಕೊಳ್ಳಲಾಗಿದೆ. ಇದೊಂದು ಪ್ರ್ಯಾಂಕ್ ಕಾರ್ಯಕ್ರಮ ಆಗಿತ್ತು ಎಂದು ಯೂಟ್ಯೂಬರ್ ಒಪ್ಪಿಕೊಂಡಿದ್ದಾರೆ.
ಆದರೆ, ತನಗೆ 1500 ರೂ. ಕೊಡುವುದಾಗಿ ಹೇಳಿ ಬೀಚ್ ಬಳಿ ನಿಲ್ಲಿಸಿ ಇಲ್ಲಸಲ್ಲದ ಪ್ರಶ್ನೆಗಳನ್ನು ಕೇಳಿದರು. ಸಾಲದ್ದಕ್ಕೆ ವಿಡಿಯೋ ಎಡಿಟ್ ಮಾಡಿ ಹಾಕಲಾಗಿದೆ, ಕಮೆಂಟ್ ಸೆಕ್ಷನ್ ಆಫ್ ಮಾಡುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದ ಮುರಿದಿದ್ದಾರೆ ಎಂದು ಯುವತಿ ಹೇಳಿದ್ದಾಳೆ.