ಅಹಮದಾಬಾದ್: ಗುಜರಾತ್ ನ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಷನ್ (ಒ.ಎನ್.ಜಿ.ಸಿ.)ನಲ್ಲಿ ಭಾರಿ ಸ್ಫೋಟ ಸಂಭವಿಸಿದ್ದು, ಹಜಿರಾ ಗ್ಯಾಸ್ ಪ್ರೊಸೆಸಿಂಗ್ ಪ್ಲಾಂಟ್ ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಸೂರತ್ ನಲ್ಲಿರುವ ಹಜಿರಾ ತೈಲ ಮತ್ತು ನೈಸರ್ಗಿಕ ಅನಿಲ ಕಾರ್ಪೊರೇಶನ್ ನಲ್ಲಿ ಈ ಅವಘಡ ಸಂಭವಿಸಿದ್ದು, ನಸುಕಿನ ವೇಳೆ 3 ಗಂಟೆ ಸುಮಾರಿಗೆ ಭಾರಿ ಸ್ಫೋಟ ಸಂಭವಿಸಿದೆ. ಬೆಂಕಿಯ ತೀವ್ರತೆಗೆ ಅನಿಲ ಘಟಕದಲ್ಲಿ ಒಂದರ ಹಿಂದೆ ಒಂದರಂತೆ ಮೂರು ಸ್ಫೋಟಗಳು ಸಂಭವಿಸಿವೆ. ಮುಂಜಾನೆ ಈ ದುರಂತ ಸಂಭವಿಸಿದ್ದರಿಂದಾಗಿ ಘಟನಾ ಸ್ಥಳದಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಒಂದು ಟರ್ಮಿನಲ್ ನಲ್ಲಿ ಸಂಭವಿಸಿದ ಬೆಂಕಿಯಿಂದಾಗಿ ಮೂರು ಟರ್ಮಿನಲ್ ಗಳು ಸ್ಫೋಟಗೊಂಡಿವೆ. ಸುತ್ತಮುತ್ತಲ ಪ್ರದೇಶಕ್ಕೂ ಬೆಂಕಿಯ ಕೆನ್ನಾಲಿಗೆ ಹರಡಿದ್ದು, ಮುಗಿಲೆತ್ತರದವರೆಗೆ ಕಪ್ಪು ಹೊಗೆ ಆವರಿಸಿಕೊಂಡಿದೆ. ಅಲ್ಲದೇ 10 ಕೀ.ಮೀ ವರೆಗೂ ಗ್ಯಾಸ್ ವಾಸನೆ ಹರಡಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ಧಾವಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.