ಹೈದರಾಬಾದ್: ಮಾದಕ ವಸ್ತುಗಳ ಕಳ್ಳ ಸಾಗಾಣೆ ಜಾಲವನ್ನು ಹೈದರಾಬಾದ್ ನ ನಾರ್ಕೊಟಿಕ್ಸ್ ಎನ್ಫೋಸ್ಮೆಂಟ್ ವಿಂಗ್ ಹಾಗೂ ಬಂಜರಾ ಹಿಲ್ಸ್ ಪೊಲೀಸರು ಬಂಧಿಸಿದ್ದು, ಬರೋಬ್ಬರಿ 1.10 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಪ್ರಕರಣ ಸಂಬಂಧ ಮೂವರು ಪೆಡ್ಲರ್ ಗಳನ್ನು ಬಂಧಿಸಿದ್ದಾರೆ. ನೈಜೀರಿಯಾ ಮೂಲದ ಒಫೊಜರ್ ಸಂಡೇ ಎಜಿಕೆ ಅಲಿಯಾಸ್ ಫ್ರಾಂಕ್, ಅಂತರಾಜ್ಯ ಡ್ರಗ್ ಪೆಡ್ಲರ್ ಭೋಪಾಲ್ ಮೂಲದ ಅನಾಸ್ ಖಾನ್ ಹಾಗೂ ಡ್ರಗ್ ಡೆಲಿವರಿ ಬಾಯ್ ಸೈಫ್ ಖಾನ್ ಬಂಧಿತರು.
ನೈಜೀರಿಯಾ ಪ್ರಜೆ ಒಫೋಜರ್ ಬೆಂಗಳೂರಿನಲ್ಲಿ ವಾಸವಾಗಿದ್ದ. ಇನ್ನುಳಿದ ಆರೋಪಿಗಳು ಹೈದರಾಬಾದ್ ನ ರಾಜೇಂದ್ರ ನಗರದಲ್ಲಿ ವಾಸವಾಗಿದ್ದರು. ಖಚಿತ ಮಾಹಿತಿ ಮೇರೆಗೆ ನಾರ್ಕೊಟಿಕ್ಸ್ ಎನ್ಫೋಸ್ಮೆಂಟ್ ವಿಂಗ್ ಹಾಗೂ ಬಂಜರಾ ಹಿಲ್ಸ್ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಕೇನ್, ಎಂಡಿಎಂ, ಎಕ್ಸ್ಟಿಸಿ ಮಾತ್ರೆಗಳು, ಚರಸ್ ಸೇರಿದಂತೆ ವಿವಿಧ ಮಾದಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.