ಜಾತಿ ಗುರುತನ್ನು ತಂತಮ್ಮ ವಿಂಡ್‌ಶೀಲ್ಡ್‌ಗಳ ಮೇಲೆ ಬಹಿರಂಗ ಪಡಿಸಿದವರ ವಿರುದ್ಧ ಶಿಕ್ಷಾರ್ಹ ಕ್ರಮ ತೆಗೆದುಕೊಳ್ಳುವ ನಿರ್ಣಯವನ್ನು ಉತ್ತರ ಪ್ರದೇಶ ಸರ್ಕಾರ ತೆಗೆದುಕೊಂಡಿದೆ.
ಇತ್ತೀಚಿನ ದಿನಗಳಲ್ಲಿ ಜನರಿಗೆ ತಂತಮ್ಮ ವಾಹನಗಳ ಮೇಲೆ ಜಾತಿ ಹೆಸರುಗಳನ್ನು ಬರೆದುಕೊಳ್ಳುವುದು ಒಂಥರಾ ಫ್ಯಾಶನ್ ಎಂಬಂತೆ ಆಗಿಬಿಟ್ಟಿದೆ. ಯಾದವ, ಜಾಟ್, ಗುರ್ಜರ್, ಬ್ರಾಹ್ಮಣ, ಪಂಡಿತ್, ಕ್ಷತ್ರಿಯ, ಲೋಧಿ, ಮೌರ್ಯ ಸೇರಿದಂತೆ ಅನೇಕ ಹೆಸರುಗಳನ್ನು ವಾಹನಗಳ ನಂಬರ್ ಪ್ಲೇಟ್‌ಗಳ ಮೇಲೆ ಹಾಕುವುದು ಟ್ರೆಂಡ್ ಆಗಿಬಿಟ್ಟಿತ್ತು.
ಈ ಸಂಬಂಧ ಉ.ಪ್ರ. ಸರ್ಕಾರದ ಹೆಚ್ಚುವರಿ ಸಾರಿಗೆ ಆಯುಕ್ತ ಮುಖೇಶ್ ಚಂದ್ರ ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಾರ್ಯಾಲಯಗಳಿಗೆ (ಆರ್‌ಟಿಓ) ಆದೇಶ ಕಳುಹಿಸಿದ್ದು, ಜಾತಿ ಹೆಸರುಗಳು ಕಂಡು ಬರುವ ವಾಹನಗಳನ್ನು ವಶಕ್ಕೆ ಪಡೆಯಲು ಸೂಚಿಸಿದ್ದಾರೆ.
ವಿಪರೀತವಾದ ಜಾತಿವಾದವನ್ನು ತೋರಿಸಿಕೊಳ್ಳುವ ಶೋಕಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಮೂಲಕ ದೇಶದ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಲು ಕೋರಿ ಮಹಾರಾಷ್ಟ್ರದ ಹರ್ಷಲ್ ಪ್ರಭು ಎಂಬುವವರು ಪ್ರಧಾನ ಮಂತ್ರಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದರು. ಇದೇ ಸಂದೇಶವನ್ನು ಉತ್ತರ ಪ್ರದೇಶ ಸರ್ಕಾರಕ್ಕೆ ಫಾರ್ವಡ್ ಮಾಡಿದ ಪ್ರಧಾನ ಮಂತ್ರಿ ಕಾರ್ಯಾಲಯ, ಈ ನಿಟ್ಟಿನಲ್ಲಿ ಏನಾದರೂ ಮಾಡಲು ಸೂಚಿಸಿತ್ತು.