ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರೋದು ಒಂದು ಆತಂಕಕಾರಿ ವಿಚಾರವಾಗಿದ್ರೆ ಇನ್ನೊಂದೆಡೆ ರೋಗಿಗಳ ಅವಶ್ಯವಿರುವ ಪ್ರಮಾಣದಲ್ಲಿ ಕೃತಕ ಆಮ್ಲಜನಕ ವ್ಯವಸ್ಥೆ ಸಿಗದೇ ಇರೋದು ಕೂಡ ಕಳವಳಕ್ಕೆ ಕಾರಣವಾಗಿದೆ. ಸರಿಯಾದ ಸಮಯದಲ್ಲಿ ಸೂಕ್ತ ಚಿಕಿತ್ಸ ಸಿಗದ ಕಾರಣಕ್ಕೆ ಅನೇಕರು ಪ್ರಾಣ ಬಿಟ್ಟಿದ್ದಾರೆ.
ಈ ಎಲ್ಲಾ ಸಂಕಷ್ಟಗಳ ನಡುವೆ ಮುಂಬೈನ ನಿವಾಸಿಯಾಗಿರುವ ಶೆಹನಾಜ್ ಶೇಖ್ ಎಂಬವರು ರೋಗಿಗಳಿಗೆ ಕೃತಕ ಆಮ್ಲಜನಕ ಪೂರೈಕೆಯ ವ್ಯವಸ್ಥೆ ಮಾಡ್ತಿದ್ದಾರೆ. ಇದೇ ಕಾರಣಕ್ಕೆ ಇವರು ʼಆಕ್ಸಿಜನ್ ಮ್ಯಾನ್ʼ ಎಂಬ ಬಿರುದನ್ನೂ ಪಡೆದಿದ್ದಾರೆ.
ಸಂಕಷ್ಟದಲ್ಲಿರುವ ರೋಗಿಗಳಿಗೆ ಸಹಾಯ ಮಾಡಬೇಕು ಅಂತಾ ತಮ್ಮ 22 ಲಕ್ಷದ ಎಸ್ಯುವಿ ಕಾರನ್ನ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಮಾರಾಟ ಮಾಡಿದ್ದಾರೆ. ಈ ಹಣದಿಂದ 160 ಆಮ್ಲಜನಕ ಸಿಲಿಂಡರ್ಗಳನ್ನ ಖರೀದಿ ಮಾಡಿದ್ದಾರೆ. ಅವಶ್ಯ ಇರುವವರಿಗೆ ಸಹಾಯ ಮಾಡಲು ಹಣ ಸಾಲದ ಕಾರಣ ತಮ್ಮ ಕಾರನ್ನ ಮಾರಿದ್ದೇನೆ ಎಂದು ಶೆಹನಾಜ್ ಹೇಳಿದ್ರು.
ಕಳೆದ ವರ್ಷ ಶೆಹನಾಜ್ ಪತ್ನಿ ಆಮ್ಲಜನಕದ ಕೊರತೆಯಿಂದಾಗಿ ಆಟೋರಿಕ್ಷಾದಲ್ಲೇ ಪ್ರಾಣವನ್ನ ಬಿಟ್ಟಿದ್ದರು. ಈ ಘಟನೆ ಬಳಿಕ ಜೀವದ ಮಹತ್ವವನ್ನ ಅರಿತ ಶೆಹನಾಜ್ ಮುಂಬೈನಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಕೆ ಕಾರ್ಯವನ್ನ ಮಾಡ್ತಿದ್ದಾರೆ. ಇದಕ್ಕಾಗಿ ಶೆಹನಾಜ್ ಸಹಾಯವಾಣಿ ಸಂಖ್ಯೆ ಹಾಗೂ ಕಂಟ್ರೋಲ್ ರೂಮ್ನ್ನೂ ತೆರೆದಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಪರಿಸ್ಥಿತಿ ತುಂಬಾನೇ ಕಠಿಣವಾಗಿದೆ ಅಂತಾರೆ ಶೆಹನಾಜ್, ಕಳೆದ ವರ್ಷ ಜನವರಿ ತಿಂಗಳಲ್ಲಿ ಇವರಿಗೆ ಆಮ್ಲಜನಕ ಬೇಕೆಂದು 50 ಕರೆಗಳು ಬಂದಿದ್ರೆ ಈ ವರ್ಷ 500ಕ್ಕೂ ಹೆಚ್ಚು ಕರೆಗಳನ್ನ ಸ್ವೀಕರಿಸಿದ್ದಾರಂತೆ.