ಮುಂಬೈ: ಆಹಾರ ಪೂರೈಕೆ ಉದ್ಯಮ ನಡೆಸುತ್ತಿರುವ ಮುಂಬೈನ ಕಾಂಡಿವಲಿಯ ತಾಯಿ – ಮಗ ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸಾವಿರಾರು ನಿರ್ಗತಿಕರಿಗೆ ಊಟ ನೀಡಿ ಮಾದರಿಯಾಗಿದ್ದಾರೆ.
ಹೀನಾ ಮಂಡಾವಿಯಾ ಅವರ ಪತಿ ಅಕಾಲಿಕ ಮರಣ ಹೊಂದಿದ ನಂತರ ಆಕೆ ಮುಂಬೈನಲ್ಲಿ ಮನೆಯೂಟ ಹಾಗೂ ಪರೋಟಾ ಡೆಲವರಿ ಉದ್ಯಮ ನಡೆಸುತ್ತಿದ್ದಾರೆ. ಪತಿ ಮೃತರಾದಾಗ 5 ವರ್ಷದವನಿದ್ದ ತಮ್ಮ ಮಗ ಹರ್ಷ ಹೆಸರಿನಲ್ಲಿ ಹರ್ಷ ತಾಲಿ ಆ್ಯಂಡ್ ಪರಾಟಾಸ್ ಅನ್ನು 2003 ರಿಂದ ಪ್ರಾರಂಭ ಮಾಡಿದ್ದು, ಈಗ ಉತ್ತಮವಾಗಿ ನಡೆಯುತ್ತಿದೆ. ಸ್ವಿಗ್ಗಿ, ಜೊಮೆಟೊಗಳಂತಹ ಫುಡ್ ಡೆಲವರಿ ಆ್ಯಪ್ ಮೂಲಕವೂ ಘರ್ ಕಾ ಖಾನಾ ಪೂರೈಕೆಯಾಗುತ್ತಿದೆ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ತಮ್ಮ ಕಾಯಂ ಗ್ರಾಹಕರಿಗೆ ಹರ್ಷ್ ತಾಲಿ ಆ್ಯಂಡ್ ಪರಾಟಾ ಡೆಲವರಿ ನೀಡಲಾಗುತ್ತಿತ್ತು. ಜತೆಗೆ ಹೀನಾ ಹಾಗೂ ಮಗ ಹರ್ಷ ಸೇರಿ ಕೆಲವು ನಿರ್ಗತಿಕರಿಗೂ ಊಟ ನೀಡಲು ಆರಂಭಿಸಿದರು. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದಾಗ ವಿದೇಶಗಳಿಂದಲೂ ಅವರಿಗೆ ಸಾಕಷ್ಟು ನೆರವು ನೀಡಿದ್ದಾರೆ.
ಇದುವರೆಗೆ 9 ದೇಶಗಳಿಂದ 270 ಜನರು 8 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ತಾಯಿ ಮಗ ಸೇರಿ 13,500 ಊಟ, 37000 ತವಾ ರೋಟಿ, 6 ಸಾವಿರ ಶುಗರ್ ಲೆಸ್ ಸ್ವೀಟ್ ವಿತರಿಸಿದ್ದಾರೆ.