ರಾಂಚಿ: ಅವರಿಗೆ ಶಹರದಲ್ಲಿ ಕೈತುಂಬ ಸಂಬಳದ ಉಪನ್ಯಾಸಕ ವೃತ್ತಿಯಿತ್ತು. ಆದರೆ, ವನ್ಯಜೀವಿಗಳ ಮೇಲಿನ ಪ್ರೀತಿ ಅವರನ್ನು ಕಾಡಿಗೆ ಸೆಳೆಯಿತು. ಛತ್ತೀಸ್ಗಢದ 30 ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಪದವೀಧರ ಎಂ. ಸೂರಜ್ ವನ್ಯಜೀವಿ ಸಂರಕ್ಷಣಾ ಕ್ಷೇತ್ರಕ್ಕೆ ಧುಮುಕಿದ ಅಪರೂಪದ ಕತೆಯಿದು.
2011 ರಲ್ಲಿ ಒಂದು ದಿನ ಕೆಲಸದಿಂದ ವಾಪಸ್ ಬರುವಾಗ ಹಾವೊಂದನ್ನು ಹೊಡೆದು ಸಾಯಿಸಲಾಗಿತ್ತು. ಇದು ಅವರು ತಮ್ಮ ವೃತ್ತಿಬಿಟ್ಟು ವನ್ಯಜೀವಿ ಸಂರಕ್ಷಣೆಗೆ ಧುಮುಕಲು ಪ್ರೇರಣೆ ನೀಡಿತು. ಸೂರಜ್ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಗೆ ಸಹಕಾರ ನೀಡುತ್ತಿದ್ದಾರೆ.
2016 ರಲ್ಲಿ ಅವರ ಯೋಚನೆಗಳಿಂದ ಪ್ರಭಾವಿತರಾದ ಡಿಎಫ್ಒ ಅಲೋಕ ತಿವಾರಿ ಅವರು ಸೂರಜ್ ರನ್ನು 2016-17 ನೇ ಸಾಲಿನಲ್ಲಿ ಬೊರಮಡೊ ವನ್ಯಧಾಮ ಹಾಗೂ ಖಾನಾ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ ಹುಲಿಗಳ ಮೇಲ್ವಿಚಾರಣೆ ತಂಡದಲ್ಲಿ ಸೇರಿಸಿಕೊಂಡರು.
ಈಗ ಸೂರಜ್ ಅವರು ಡೇವಿಡ್ ಶೆಪರ್ಡ್ ವೈಲ್ಡ್ಲೈಫ್ ಟ್ರಸ್ಟ್, ವೈಲ್ಡ್ ಲೈಫ್ ಟ್ರಸ್ಟ್ ಆಫ್ ಇಂಡಿಯಾ ಹಾಗೂ ರಾಜ್ಯ ಅರಣ್ಯ ಇಲಾಖೆಯ ಜತೆ ಕೆಲಸ ಮಾಡುತ್ತಿದ್ದಾರೆ. 2018 ರಲ್ಲಿ ರಾಷ್ಟ್ರೀಯ ಹುಲಿ ಪ್ರಾಧಿಕಾರದ ಜತೆ ಸೇರಿ ತಮ್ಮ ನಾಲ್ವರು ಸಹಚರರನ್ನೊಡಗೂಡಿ ಉದ್ದಂತಿ-ಸೀತಾನದಿ ಹುಲಿ ಸಂರಕ್ಷಿತ ಅಭಯಾರಣ್ಯದಲ್ಲಿ 300 ಕಡೆಗಳಲ್ಲಿ ಕ್ಯಾಮರಾ ಅಳವಡಿಸಿದರು. ಪರಿಣಾಮ 150 ಕ್ಕೂ ಹೆಚ್ಚು ವನ್ಯಜೀವಿ ಬೇಟೆ ಪ್ರಕರಣಗಳನ್ನು ತಡೆಯಲು ಸಾಧ್ಯವಾಯಿತು. ದೊಡ್ಡ ಮರಗಳ್ಳತನ ಪ್ರಕರಣಗಳು ಪತ್ತೆಯಾದವು.
ವನ್ಯಜೀವೀ ಸಂರಕ್ಷಣಾ ಹೀರೋ ಎಂದು ಅವರಿಗೆ ಕಳೆದ ವರ್ಷ ಡಿಸೆಂಬರ್ ನಲ್ಲಿ 10 ಲಕ್ಷ ರೂ. ನಗದು ಮೊತ್ತವಿರುವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.