ಗುರು ಎಂಬ ಹೆಸರಿಗೆ ಅನ್ವರ್ಥವಾಗಬಲ್ಲ ಒಡಿಶಾದ ಹಿರಿಯ ವ್ಯಕ್ತಿಯೊಬ್ಬರು, ಮಕ್ಕಳಿಗೆ ಪಾಠ ಹೇಳಿಕೊಡುವ ತಮ್ಮ ಸತ್ಕರ್ಮದ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ನಂದಾ ಪ್ರಾಸ್ತಿ ಹೆಸರಿನ ಈ 75 ವರ್ಷದ ವ್ಯಕ್ತಿ ಒಡಿಶಾದ ಜೈಪುರ ಜಿಲ್ಲೆಯ ಮಕ್ಕಳಿಗೆ ಪಾಠ ಹೇಳಿಕೊಡುವುದು ಮಾತ್ರವಲ್ಲದೇ, ತಮ್ಮ ಸೇವೆಯನ್ನು ಕಳೆದ 75 ವರ್ಷಗಳಿಂದ ಮಾಡುತ್ತಿದ್ದು, ಸರ್ಕಾರದಿಂದ ಯಾವುದೇ ನೆರವಿಲ್ಲದೇ ಮುಂದುವರೆಯುತ್ತಲೇ ಬಂದಿದ್ದಾರೆ.
ಮರದ ಕೆಳಗೆ ಮಕ್ಕಳಿಗೆ ಪಾಠ ಹೇಳಿಕೊಡುತ್ತಾ ಬಂದಿರುವ ಈ ಗುರುವರ್ಯ, ಖುದ್ದು ಆ ಊರಿನ ಸರ್ಪಂಚರು ಸಣ್ಣದೊಂದು ಮೂಲ ಸೌಕರ್ಯ ಕಟ್ಟಿಕೊಳ್ಳಲು ಸರ್ಕಾರದ ನೆರವು ಪಡೆಯುವಂತೆ ಮನವಿ ಮಾಡಿಕೊಳ್ಳುತ್ತಾ ಬಂದರೂ ಸಹ, ಅದನ್ನು ಸವಿನಯವಾಗಿ ನಿರಾಕರಿಸುತ್ತಾ ಬಂದಿದ್ದಾರೆ.
ಮಕ್ಕಳಿಗೆ ನಾಲ್ಕನೇ ತರಗತಿವರೆಗೂ ಪ್ರಾಥಮಿಕ ಶಿಕ್ಷಣ ಪೂರೈಸಿದ ಬಳಿಕ ಅವರನ್ನು ಸರಿಯಾದ ಶಿಕ್ಷಣ ಕೇಂದ್ರಗಳಿಗೆ ಪಾಠ ಕಲಿಯಲು ಕಳುಹಿಸಬೇಕೆನ್ನುವ ಪ್ರಾಸ್ತಿ, ತಮ್ಮ ಈ ಸತ್ಕಾರ್ಯಕ್ಕೆ ಯಾವುದೇ ಶುಲ್ಕವನ್ನು ತೆಗೆದುಕೊಳ್ಳುವುದಿಲ್ಲ.
ತಮ್ಮ ಮೊದಲ ಬ್ಯಾಚ್‌ನ ವಿದ್ಯಾರ್ಥಿಗಳ ಮರಿ ಮೊಮ್ಮಕ್ಕಳಿಗೂ ಸಹ ಪಾಠ ಮಾಡುತ್ತಿರುವ ಪ್ರಾಸ್ತಿ, ತಮ್ಮ ಬಾರ್ತಂಡಾ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನಕ್ಷರಸ್ಥರು ಇದ್ದ ಕಾರಣ ಈ ಕೆಲಸಕ್ಕೆ ಮುಂದಾಗಿದ್ದಾಗಿ ತಿಳಿಸಿದ್ದಾರೆ.