ಹಲದ್ವಿನಿ: ಕೊರೊನಾ ಮಹಾಮಾರಿ ಕಳೆದ ಏಳು ತಿಂಗಳಿಂದ ವಿದ್ಯಾರ್ಥಿಗಳನ್ನು ಮನೆಯಲ್ಲೇ ಕೂಡ್ರಿಸಿದೆ. ಶಾಲೆ, ಕಾಲೇಜ್‌ಗಳು ಆನ್‌ಲೈನ್ ತರಗತಿ ಪ್ರಾರಂಭಿಸಿದರೂ ಹಲ ಮಕ್ಕಳು ಸ್ಮಾರ್ಟ್ ಫೋನ್ ಕೊಳ್ಳಲಾಗದ ಪರಿಸ್ಥಿತಿ, ಇನ್ನು ಹಲವರಿಗೆ ನೆಟ್ವರ್ಕ್ ಸಮಸ್ಯೆಯಿಂದ ಆನ್‌ಲೈನ್ ತರಗತಿ ನೋಡಲಾಗುತ್ತಿಲ್ಲ.
ಗುಡ್ಡಗಾಡು ರಾಜ್ಯ ಉತ್ತರಾಖಂಡ ರಾಜ್ಯದ ಹಲದ್ವಿನಿ ಎಂಬ ಊರಿನ 27 ವರ್ಷದ ಮಹಿಳೆಯೊಬ್ಬಳು ಈ ಸಮಸ್ಯೆ ನೀಗಿಸಲು ಮಾಡುತ್ತಿರುವ ಅಪರೂಪದ ಕಾರ್ಯಕ್ಕೆ ನೆಟ್ಟಿಗರು ಬಹುಪರಾಕ್ ಹೇಳಿದ್ದಾರೆ.
ಉತ್ತರಾಖಂಡ್ ರಾಜ್ಯದ ಅಲ್ಮೊರಾ ಜಿಲ್ಲೆಯ ದೇವಾಯಲ್ ಎಂಬ ಊರಿನ ಸರ್ಕಾರಿ ಮಹಿಳೆಯರ ಇಂಟರ್ ಕಾಲೇಜ್‌ನ ಪ್ರಾಂಶುಪಾಲರ ಪುತ್ರಿ ಶುಭಂ ಧರ್ಮಕಸ್ತು ಎಂಬುವವರು ಜನರಿಂದ ಹಳೆಯ ಸ್ಮಾರ್ಟ್ ಫೋನ್‌ಗಳನ್ನು ಪಡೆದು ನೂರಕ್ಕೂ ಅಧಿಕ ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಿದ್ದಾರೆ. ಮೊದಲು ತಮ್ಮ ತಾಯಿಯ ಕಾಲೇಜ್‌ನ ವಿದ್ಯಾರ್ಥಿಗಳಿಗೆ ಫೋನ್ ನೀಡಿದ್ದು, ನಂತರ ವಿವಿಧೆಡೆ ವಿತರಣೆ ಮಾಡಿದ್ದಾರೆ.
“ಕರೊನಾದಿಂದ ಕಾಲೇಜ್ ಬಂದಾಗಿದ್ದರಿಂದ ಆನ್‌ಲೈನ್ ಕ್ಲಾಸ್ ನಡೆದಿದೆ. ಆದರೆ, ಬಹುತೇಕ ವಿದ್ಯಾರ್ಥಿಗಳ ಬಳಿ ಸ್ಮಾರ್ಟ್ ಫೋನ್ ಇಲ್ಲದ ಕಾರಣ ಅವರಿಗೆ ಶಿಕ್ಷಣ ತಲುಪುತ್ತಿಲ್ಲ ಎಂದು ಅಮ್ಮ ಬೇಸರ ವ್ಯಕ್ತಪಡಿಸಿದರು. ಅವರ ಶಾಲೆಯ ಒಂದು ವಿದ್ಯಾರ್ಥಿನಿಗೆ ನಮ್ಮ ಮನೆಯಲ್ಲಿದ್ದ ಒಂದು ಹಳೆಯ ಸ್ಮಾರ್ಟ್ ಫೋನ್ ನೀಡಿದೆ. ಆಗ ನಾವು ಇತರರಿಗೂ ವಿತರಿಸಬಹುದು ಎಂಬ ಯೋಚನೆ ಬಂತು. ಇನ್ಸ್ಟಾಗ್ರಾಂನಲ್ಲಿ ಈ ಕುರಿತು ಸಂದೇಶ ಹಾಕಿದೆ. ಗುರುಗ್ರಾಮ ಬೆಂಗಳೂರು ಹೀಗೆ ಎಲ್ಲೆಡೆಯಿಂದ ಹಲವರು ಹಳೆಯ ಸ್ಮಾರ್ಟ್ ಫೋನ್ ಕಳಿಸಿಕೊಟ್ಟು ನೆರವಾದರು. ಅವುಗಳನ್ನು ಅಂಗಡಿಯೊಂದರಲ್ಲಿ ರಿಪೇರಿ ಮಾಡಿಸಿ ವಿದ್ಯಾರ್ಥಿನಿಯರಿಗೆ ತಲುಪಿಸಿದೆವು” ಎಂದು ಶುಭಂ ತಮ್ಮ ಸಾಹಸಗಾಥೆ ಹೇಳುತ್ತಾರೆ.