ಕೇಂದ್ರ ಸರ್ಕಾರದ ಕೃಷಿ ಸುಧಾರಣಾ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರಿಗೆ ಸಾಕಷ್ಟು ಬೆಂಬಲ ಬರುತ್ತಿದೆ ಎಂದು ಮಾಧ್ಯಮಗಳಲ್ಲಿ ಬಹಳ ಹೇಳಲಾಗುತ್ತಿದೆ.
ಇದೀಗ ಕೇರಳದ ತಿರುವನಂತಪುರಂನ 22 ವರ್ಷದ ವಿದ್ಯಾರ್ಥಿ ಜಿಬಿನ್ ಜಾರ್ಜ್ ತನ್ನೂರಿನಿಂದ ಕಾಶ್ಮೀರದವರೆಗೂ ಸೈಕ್ಲಿಂಗ್ ಮಾಡುವ ಮೂಲಕ ಪ್ರತಿಭಟನಾ ನಿರತ ರೈತರಿಗೆ ನೈತಿಕ ಬೆಂಬಲ ಸೂಚಿಸಿದ್ದಾರೆ. ತನ್ನ ಹಾದಿಯುದ್ದಕ್ಕೂ ರೈತರ ಸಮಸ್ಯೆಗಳ ಕುರಿತಂತೆ ಸಾರ್ವಜನಿಕ ಮಟ್ಟದಲ್ಲಿ ಜಾಗೃತಿ ಮೂಡಿಸಲು ಜಾರ್ಜ್ ಯತ್ನಿಸಲಿದ್ದಾರೆ.
ತಿರುವನಂತಪುರಂನ ಅಟ್ಟಿಂಗಲ್‌ನಲ್ಲಿರುವ ರಾಜಧಾನಿ ಹೊಟೇಲ್ ಮ್ಯಾನೇಜ್‌ಮೆಂಟ್ & ಕೆಟರಿಂಗ್ ತಂತ್ರಜ್ಞಾನ ಸಂಸ್ಥೆಯಲ್ಲಿ ಪದವಿ ಓದುತ್ತಿದ್ದಾರೆ ಜಾರ್ಜ್.
ಪಶ್ಚಿಮ ಕರಾವಳಿಗುಂಟ ಹಾದಿಯಲ್ಲಿ ಗೋವಾ ತಲುಪಿ, ಬಳಿಕ ಮಹಾರಾಷ್ಟ್ರದಿಂದ ಆಚೆಗೆ ಬೇರೆ ಜಾಗಗಳನ್ನೂ ಹಾದು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರತ್ತ ಧಾವಿಸುವುದಾಗಿ ಜಾರ್ಜ್ ಹೇಳಿಕೊಂಡಿದ್ದು, “ಸೈಕ್ಲಿಂಗ್ ಸಂದರ್ಭದಲ್ಲಿ ಹಾದಿಯಲ್ಲಿ ಸಿಗುವ ಜನರೊಂದಿಗೆ ಸಂವಹನ ನಡೆಸಿ, ಕೇಂದ್ರದ ಈ ಕಾನೂನುಗಳು ಅನ್ನದಾತರಿಗೆ ಹೇಗೆ ತೊಡಕಾಗಲಿವೆ ಎಂದು ವಿವರಿಸುವೆ,” ಎಂದು ತಿಳಿಸಿದ್ದಾರೆ.