ಸ್ಟೋರ್ ಒಂದರಲ್ಲಿ ಕದ್ದಿದ್ದ ಸ್ಮಾರ್ಟ್ ಫೋನ್ ಒಂದನ್ನು ಆಪರೇಟ್ ಮಾಡಲು ಬಾರದೇ ಅದರ ಮಾಲೀಕರಿಗೆ ಖುದ್ದು ಕಳ್ಳನೇ ತಂದೊಪ್ಪಿಸಿದ ಘಟನೆಯೊಂದು ಪಶ್ಚಿಮ ಬಂಗಾಳದ ಪೂರ್ವ ಬುರ್ಧ್ವಾನ್ ಜಿಲ್ಲೆಯ ಜಮಾಲ್ಪುರದಲ್ಲಿ ನಡೆದಿದೆ.
ಸೆಪ್ಟೆಂಬರ್ 4ರಂದು ಸಿಹಿ ಅಂಗಡಿಗೆ ಬಂದಿದ್ದ ವ್ಯಕ್ತಿಯೊಬ್ಬರು ತಮ್ಮ 45,000 ರೂ. ಬೆಲೆಬಾಳುವ ಸ್ಮಾರ್ಟ್ ಫೋನ್ ಮರೆತು ಹೋಗಿದ್ದರು. ಶಾಪ್‌ನ ಕೌಂಟರ್‌ನಲ್ಲಿ ಬಿದ್ದಿದ್ದ ಫೋನನ್ನು 22 ವರ್ಷದ ಯುವಕನೊಬ್ಬ ಕದ್ದೊಯ್ದಿದ್ದ.
ತನ್ನ ಫೋನ್ ಕಳೆದುಹೋಗಿರುವುದಾಗಿ ಅದರ ಮಾಲೀಕರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಮತ್ತೊಂದು ಫೋನ್ ನಿಂದ ಆ ಫೋನ್‌ಗೆ ಕರೆ ಮಾಡಲು ಯತ್ನಿಸಿದ ವೇಳೆ ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿತ್ತು. ಆದರೆ ಭಾನುವಾರದಂದು ಮತ್ತೊಮ್ಮೆ ಆ ಫೋನ್‌ಗೆ ಕರೆ ಮಾಡಿದಾಗ, ಆ ಕಡೆಯಿಂದ ಕರೆ ಸ್ವೀಕರಿಸಿದ ಹುಡುಗ, ತನಗೆ ಆ ಫೋನ್ ಬಳಸುವುದು ಗೊತ್ತಿಲ್ಲದ ಕಾರಣ ಅದನ್ನು ಮರಳಿಸುವುದಾಗಿ ಹೇಳಿದ್ದಾನೆ. ದೂರುದಾರರು ತಮ್ಮ ದೂರನ್ನು ಹಿಂಪಡೆದ ಕಾರಣ ಪೊಲೀಸರು ಕದ್ದಿದ್ದ ಹುಡುಗನ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಲಿಲ್ಲ.