ಕರ್ನಾಟಕಕ್ಕೆ ನೀಡುತ್ತಿರುವ ಆಮ್ಲಜನಕದ ಪೂರೈಕೆಯ ಪ್ರಮಾಣವನ್ನ ಹೆಚ್ಚಿಸುವಂತೆ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರಕ್ಕೆ ಭಾರೀ ಮುಖಭಂಗವಾಗಿದೆ. ಕೇಂದ್ರ ಸರ್ಕಾರದ ಅರ್ಜಿಯನ್ನ ತಿರಸ್ಕರಿಸುವ ಮೂಲಕ ಸುಪ್ರೀಂ ಕೋರ್ಟ್ ರಾಜ್ಯ ಹೈಕೋರ್ಟ್ ಆದೇಶವನ್ನ ಎತ್ತಿ ಹಿಡಿದಿದೆ.
ರಾಜ್ಯದಲ್ಲಿ ವೈದ್ಯಕೀಯ ಆಮ್ಲಜನಕದ ಅಭಾವದಿಂದಾಗಿ ಸೋಂಕಿತರು ಸಾವನ್ನಪ್ಪಿದ್ದ ಬಳಿಕ ವಿಚಾರಣೆ ಕೈಗೆತ್ತಿಕೊಂಡಿದ್ದ ರಾಜ್ಯ ಹೈಕೋರ್ಟ್ ಕರ್ನಾಟಕಕ್ಕೆ ಆಮ್ಲಜನಕ ಪೂರೈಕೆಯನ್ನ 965 ಮೆ.ಟನ್ನಿಂದ 1200 ಮೆ.ಟನ್ಗೆ ಏರಿಕೆ ಮಾಡಿ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು. ಆದರೆ ಕರ್ನಾಟಕ ಹೈಕೋರ್ಟ್ನ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಿತ್ತು.
ಈ ಸಂಬಂಧ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಕರ್ನಾಟಕಕ್ಕೆ ಆಕ್ಸಿಜನ್ ರಿಲೀಫ್ ನೀಡಿದೆ. ಕರ್ನಾಟಕ ಹೈಕೋರ್ಟ್ನ ಆದೇಶದಂತೆಯೇ ರಾಜ್ಯಕ್ಕೆ 1200 ಮೆ. ಟನ್ ವೈದ್ಯಕೀಯ ಆಮ್ಲಜನಕ ಪೂರೈಕೆ ಮಾಡಿ ಎಂದು ಆದೇಶ ನೀಡಿದೆ.