ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿ ನಿತ್ಯ ಮೂರು ಲಕ್ಷಕ್ಕೂ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಕೊರೊನಾ ಸೋಂಕು ಮಿತಿಮೀರಿರುವ ಹಿನ್ನೆಲೆಯಲ್ಲಿ ಕರ್ನಾಟಕ, ಮಹಾರಾಷ್ಟ್ರ, ದೆಹಲಿ ಹಾಗೂ ಉತ್ತರ ಪ್ರದೇಶದಂತಹ ರಾಜ್ಯಗಳು ಕೋವಿಡ್ ಚೈನ್ ಮುರಿಯಲು ಸಾಕಷ್ಟು ಕಠಿಣ ಕ್ರಮಗಳನ್ನ ಕೈಗೊಳ್ಳುತ್ತಿವೆ.
ರಾಜ್ಯದಲ್ಲಿ ಲಾಕ್ಡೌನ್ನಂತಹ ನಿರ್ಧಾರಗಳನ್ನ ಸರ್ಕಾರಗಳು ತೆಗೆದುಕೊಂಡಿದ್ದು ಜನರ ಸಂಪರ್ಕ ಕಡಿಮೆ ಮಾಡುವ ಯತ್ನದಲ್ಲಿದೆ. ಈ ನಡುವೆ ವಿಜ್ಞಾನಿಗಳ ಗುಂಪೊಂದು ಜನರ ನಡುವಿನ ಸಂಪರ್ಕ ತಡೆಯುವ ಬದಲು ಜನರ ನಡುವಿನ ಸಂಪರ್ಕ ಸುರಕ್ಷಿತವಾಗಿರುವಂತೆ ಕ್ರಮ ಕೈಗೊಳ್ಳೋದು ಹೆಚ್ಚು ಸೂಕ್ತ ಎಂದು ಸಲಹೆ ನೀಡಿದ್ದಾರೆ.
ಖ್ಯಾತ ವೈರಾಲಜಿಸ್ಟ್ ಹಾಗೂ ಅನುಭವಿ ಲಸಿಕೆ ಸಂಶೋಧಕ ಡಾ. ತೆಕ್ಕೆಕರ ಜಾಕೋಬ್ ಜಾನ್, ಹೆಚ್ಐವಿ ಮಾದರಿಯಲ್ಲೇ ಜನರು ಹಾಗೂ ಸರ್ಕಾರ ಕೊರೊನಾ ವಿರುದ್ಧ ಹೋರಾಡಬೇಕಿದೆ ಎಂದು ಹೇಳಿದ್ದಾರೆ.
ಒಂದು ವೇಳೆ ಹೆಚ್ಐವಿ ನಿಮಗೆ ಬಾಧಿಸಿದ್ರೆ ಏನು ಮಾಡಿತ್ತೀರಿ..? ಲೈಂಗಿಕ ಕ್ರಿಯೆಯಲ್ಲಿ ಭಾಗಿ ಆಗುವ ಹಾಗಿಲ್ಲ ಅಥವಾ ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಬೇಕು. ಸುರಕ್ಷಿತ ಲೈಂಗಿಕ ಕ್ರಿಯೆಯಲ್ಲಿ ನೀವು ಕಾಂಡೋಮ್ನಂತಹ ಸಾಧನಗಳನ್ನ ಬಳಕೆ ಮಾಡುತ್ತೀರಿ. ಅದೇ ರೀತಿ ಮಾಸ್ಕ್ ಹಾಕಿಕೊಳ್ಳುವುದು ಸರಿಯಾದ ಮಾರ್ಗವೇ ಹೊರತು ಲಾಕ್ಡೌನ್ ಅಲ್ಲ ಎಂದು ಡಾ. ಜಾನ್ ಹೇಳಿದ್ದಾರೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಮೊದಲ ಬಾರಿಗೆ ದೇಶದಲ್ಲಿ ಲಾಕ್ಡೌನ್ ಜಾರಿಗೆ ತಂದ ಸಂದರ್ಭದಲ್ಲೂ ಸರ್ಕಾರದ ಈ ಕ್ರಮವನ್ನ ಜಾನ್ ವಿರೋಧಿಸಿದ್ದರು. ಸಾಮಾಜಿಕ ಸಂಪರ್ಕ ಕಡಿಮೆಯಾಗುತ್ತಾ ಹೋದಂತೆ ಜನರ ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಜನರಿಗೆ ಲಾಕ್ಡೌನ್ ಮಾಡಿ ನಿರ್ಬಂಧ ಹೇರುವ ಬದಲು ಮಾಸ್ಕ್ ಕಡ್ಡಾಯ ಧರಿಸುವ ಬಗ್ಗೆ ಸರಿಯಾದ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಸ್ಪುಟ್ನಿಕ್ ವಿ ಲಸಿಕೆ ಸಲಹಾ ಮಂಡಳಿಯಲ್ಲಿರುವ ಖ್ಯಾತ ವೈರಲಾಜಿಸ್ಟ್ ಪ್ರೊ. ವಸಂತಪುರಂ ರವಿ ಕೂಡ ಲಾಕ್ಡೌನ್ ಕೊರೊನಾಗೆ ಪರಿಹಾರವಲ್ಲ ಅಲ್ಲದೇ ಇದೊಂದು ಅವೈಜ್ಞಾನಿಕ ಮಾರ್ಗ ಎಂದು ಅಭಿಪ್ರಾಯಪಟ್ಟಿದ್ದಾರೆ.
ಒತ್ತಡ ಹೇರಿದ ಮಾತ್ರಕ್ಕೆ ಜನರ ನಡವಳಿಕೆಯಲ್ಲಿ ಬದಲಾವಣೆ ಆಗೋದಿಲ್ಲ. ಹೆಚ್ಐವಿ ಆರಂಭಿಕ ದಿನಗಳಲ್ಲೂ ಕೊರೊನಾದಲ್ಲಿ ಮಾಸ್ಕ್ ಹಾಕಲು ನಿರಾಕರಿಸಿದಂತೆ ಜನರು ಕಾಂಡೋಮ್ ಹಾಕಿಕೊಳ್ಳಲೂ ಸಹ ಒಪ್ಪಿರಲಿಲ್ಲ. ಈ ಸಮಯದಲ್ಲಿ ಜನರಿಗೆ ಲೈಂಗಿಕ ಕ್ರಿಯೆ ಮಾಡದೇ ಇರೋದಕ್ಕಿಂತ ಸುರಕ್ಷಿತ ಲೈಂಗಿಕ ಕ್ರಿಯೆ ಸೂಕ್ತ ಎಂದು ಜನರಿಗೆ ತಿಳಿ ಹೇಳಲಾಗಿತ್ತು ಎಂದು ಹೇಳಿದ್ದಾರೆ.
ಇನ್ನು ಇದೇ ವಿಚಾರವಾಗಿ ಮಾತನಾಡಿದ ವೈರಸ್ ವಿಜ್ಞಾನಿ ಪ್ರೊ. ರಾಮಸ್ವಾಮಿ ಪಿಟ್ಚಪ್ಪನ್, ಲಾಕ್ಡೌನ್ನಿಂದ ದೇಶದ ಅರ್ಥ ವ್ಯವಸ್ಥೆ ಸಂಪೂರ್ಣ ಕುಸಿದು ಹೋಗುತ್ತಿದೆ. ಇದರಿಂದ ಯಾವುದೇ ಲಾಭವಿಲ್ಲ ಎಂದು ಹೇಳಿದ್ದಾರೆ.