ಈ ವರ್ಷದ ವಿಶ್ವದ ಅತಿ ಮೋಜಿನ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದೆ. ವನ್ಯಜೀವಿಗಳ ಛಾಯಾಚಿತ್ರಗಳನ್ನು ನೋಡುವುದೇ ಸಂಭ್ರಮ. ಅದರಲ್ಲೂ ಮೋಜಿನ ಫೋಟೋಗಳು ಇನ್ನಷ್ಟು ಉತ್ಸಾಹ ಕೆರಳಿಸುತ್ತವೆ. ಇಲ್ಲಿನ ಫೋಟೋಗಳು ನಿಮ್ಮ ದಿನವನ್ನು ಅತಿ ಉಲ್ಲಸಿತಗೊಳಿಸುವುದರಲ್ಲಿ ಸಂಶಯವೇ ಇಲ್ಲ.
ವನ್ಯಜೀವಿ ಛಾಯಾಚಿತ್ರ ಆನ್‌ಲೈನ್ ಸ್ಪರ್ಧೆಯನ್ನು ಪೌಲ್ ಜೊಯ್ ಸನ್ ಹಿಕ್ಸ್ ಹಾಗೂ ಟೊಮ್ ಸುಲ್ಲಂ ಎಂಬ ವೃತ್ತಿಪರ ಫೋಟೋಗ್ರಾಫರ್‌ಗಳು ಪ್ರಾರಂಭಿಸಿದ್ದಾರೆ. ಇಬ್ಬರೂ ವನ್ಯಜೀವಿ ಸಂರಕ್ಷಣಾಸಕ್ತರಾಗಿದ್ದಾರೆ. ವನ್ಯಜೀವಿಗಳ ನಡುವಿನ ಮೋಜಿನ ಸನ್ನಿವೇಶಗಳ ಅನಾವರಣ ಹಾಗೂ ವನ್ಯಜೀವಿ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಈ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆ ನಡೆಸುತ್ತಿದ್ದಾರೆ.
ಈ ವರ್ಷಕ್ಕೆ 44 ಅತಿ ಶ್ರೇಷ್ಠ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ ಇಲಿಯೊಂದಿಗೆ ನರಿ ಮಾತುಕತೆ ನಡೆಸುವಂತೆ ಕಾಣುವ, ನಗುವ ಮೀನು, ನಗುವ ಜಿರಾಫೆ, ಕೋಪಿಸಿಕೊಳ್ಳುವ ಕಡಲ ಆಮೆ, ಪೃಷ್ಟ ಕೆರೆದುಕೊಳ್ಳುವ ಮಂಗ, ತಾಯಿ ಮಗಳು ಆನೆಗಳೆರಡು ಸೇರಿ ಕಾಲನ್ನು ಎತ್ತಿ ಡಾನ್ಸ್ ಮಾಡುವ ಭಂಗಿ ಮುಂತಾದ ಫೋಟೋಗಳು ನಗೆಯನ್ನು ಉಕ್ಕಿ ಬರುವಂತೆ ಮಾಡುತ್ತವೆ. ವಿಶೇಷ ಎಂದರೆ ಭಾರತದ ಐವರು ಛಾಯಾಗ್ರಾಹಕರ ಚಿತ್ರಗಳೂ ಅಂತಿಮ ಸುತ್ತಿಗೆ ಆಯ್ಕೆಯಾಗಿವೆ.