ತೆಲಂಗಾಣದಲ್ಲಿ ಶಾಲೆ ಹಾಗೂ ಕಾಲೇಜುಗಳು ಫೆಬ್ರವರಿ 1ರಿಂದ ತೆರೆಯಲಿವೆ ಎಂದು ತೆಲಂಗಾಣ ಸಿಎಂ ಕೆ. ಚಂದ್ರಶೇಖರ್ ರಾವ್ ಮಾಹಿತಿ ನೀಡಿದ್ದಾರೆ. 9ನೇ ತರಗತಿಯಿಂದ ಮುಂದಿನ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ತರಗತಿ ಆರಂಭವಾಗಲಿದೆ. ಶಾಲೆ ಪುನಾರಂಭದ ವೇಳೆ ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ಶಾಲೆಗಳನ್ನ ಪುನಾರಂಭ ಮಾಡುವ ವಿಚಾರವಾಗಿ ತೆಲಂಗಾಣ ಪೋಷಕರ ಸಂಘದ ಸದಸ್ಯರು ಶಿಕ್ಷಣ ಇಲಾಖೆ ಸಚಿವ ಸಬಿತಾ ಇಂದ್ರ ರೆಡ್ಡಿ ಜೊತೆ ಚರ್ಚೆ ನಡೆಸಿದ ಒಂದು ವಾರದ ಬಳಿಕ ಸಚಿವರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ನಿರ್ಧಾರವನ್ನ ಕೈಗೊಳ್ಳಲಾಗಿದೆ.
ಶಾಲೆ ಹಾಗೂ ಕಾಲೇಜುಗಳು ಪುನಾರಂಭವಾಗೋಕೂ ಮೊದಲು ಪ್ರಯೋಗಾಲಯ ಸೇರಿದಂತೆ ಎಲ್ಲಾ ತರಗತಿ ಕೊಠಡಿಗಳನ್ನ 1 ಪರ್ಸೆಂಟ್ ಹೈಪೋಕ್ಲೋರೈಡ್ ದ್ರಾವಣದೊಂದಿಗೆ ಸ್ವಚ್ಛಗೊಳಿಸಬೇಕು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಫೇಸ್ ಮಾಸ್ಕ್ ಕಡ್ಡಾಯ ಅಲ್ಲದೇ ನಿಯಮಿತವಾಗಿ ಕೈಗಳನ್ನ ತೊಳೆಯುತ್ತಿರಬೇಕು. ಥರ್ಮಲ್ ಸ್ಕ್ರೀನಿಂಗ್, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸುವಂತೆ ಸೂಚನೆ ನೀಡಲಾಗಿದೆ.