ತೆಲಂಗಾಣದಲ್ಲಿ ಸರ್ಕಾರಿ ಅಧಿಕಾರಿಯೊಬ್ಬರು 1.12 ಕೋಟಿ ರೂಪಾಯಿ ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ.
ಮೇಡಕ್ ಜಿಲ್ಲೆಯ ಹೆಚ್ಚುವರಿ ಕಲೆಕ್ಟರ್ ಗಡ್ಡಮ್ ನಾಗೇಶ್ ಲಂಚ ಸ್ವೀಕರಿಸುವಾಗ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ನರ್ಸಾಪುರ ಮಂಡಲದ ಚೆಪ್ಪಲೂರ್ತಿ ಗ್ರಾಮದಲ್ಲಿ 112 ಎಕರೆ ಜಮೀನಿಗೆ ಸಂಬಂಧಿಸಿದಂತೆ ನೋ ಅಬ್ಜಕ್ಷನ್ ಸರ್ಟಿಫಿಕೇಟ್ ನೀಡಲು ಲಂಚಕ್ಕೆ ಬಲವಂತ ಮಾಡಿದ್ದರು. ಎಕರೆಗೆ 1 ಲಕ್ಷ ರೂಪಾಯಿಯಂತೆ 112 ಎಕರೆಗೆ 1.12 ಕೋಟಿ ರೂಪಾಯಿ ಲಂಚ ಕೇಳಿದ ಅಧಿಕಾರಿ 40 ಲಕ್ಷ ರೂಪಾಯಿ ನಗದು ಹಾಗೂ 72 ಲಕ್ಷ ರೂಪಾಯಿಯನ್ನು 5 ಎಕರೆ ಜಮೀನಿನ ರೂಪದಲ್ಲಿ ಪಡೆಯಲು ಬೇಡಿಕೆಯಿಟ್ಟಿದ್ದರು.
ರೈತರು ಅಧಿಕಾರಿಯೊಂದಿಗೆ ನಡೆಸಿದ ಸಂಭಾಷಣೆಯನ್ನು ರೆಕಾರ್ಡ್ ಮಾಡಿಕೊಂಡು ಎಸಿಬಿಗೆ ದೂರು ನೀಡಿದ್ದು, ಎಸಿಬಿ ಕಾರ್ಯಾಚರಣೆ ನಡೆಸಿ 40 ಲಕ್ಷ ರೂಪಾಯಿ ನಗದು ಸೇರಿ ಲಂಚ ಸ್ವೀಕರಿಸುವಾಗ ದಾಳಿ ಮಾಡಿ ವಶಕ್ಕೆ ಪಡೆದುಕೊಂಡಿದೆ. ಮೇಡಕ್ ಪಟ್ಟಣ ಮತ್ತು ಇತರೆ ಸ್ಥಳಗಳಲ್ಲಿ ಅಧಿಕಾರಿಗೆ ಸಂಬಂಧಿಸಿದ ನಿವಾಸ, ಸ್ಥಳಗಳಲ್ಲಿ ದಾಳಿ ಮಾಡಿ ಪರಿಶೀಲನೆ ನಡೆಸಲಾಗಿದೆ ಎಂದು ಸಂಗಾರೆಡ್ಡಿ ಎಸಿಬಿ ಉಪ ಅಧೀಕ್ಷಕ ಸೂರ್ಯನಾರಾಯಣ ಹೇಳಿದ್ದಾರೆ.