ತೆಲಂಗಾಣದಲ್ಲಿ ಮೊದಲು ಕೊರೊನಾ ಲಸಿಕೆಯನ್ನ ತಾನೇ ಸ್ವೀಕರಿಸಲಿದ್ದೇನೆ ಎಂದು ಹೇಳಿದ್ದ ತೆಲಂಗಾಣ ಆರೋಗ್ಯ ಸಚಿವ ಈಟಾಲಾ ರಾಜೇಂದರ್ ಪ್ರಧಾನಿ ನರೇಂದ್ರ ಮೋದಿಯವರ ಕಟ್ಟು ನಿಟ್ಟಿನ ಸೂಚನೆ ಬಳಿಕ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಲಸಿಕೆ ಸುರಕ್ಷತೆ ಬಗ್ಗೆ ಜನರಿಗೆ ಇನ್ನೂ ಗೊಂದಲವಿದೆ. ಹಾಗಾಗಿ ತೆಲಂಗಾಣದಲ್ಲಿ ಜನರಿಗೆ ಆತ್ಮ ವಿಶ್ವಾಸ ತುಂಬಲು ನಾನೇ ಮೊದಲು ಲಸಿಕೆ ಪಡೆಯುತ್ತೇನೆ ಎಂದು ಸಚಿವ ಈಟಾಲಾ ರಾಜೇಂದರ್ ಹೇಳಿದ್ದರು.
ಆದರೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ಬಳಿಕ ಈ ನಿರ್ಧಾರದಿಂದ ಈಟಾಲಾ ಹಿಂದೆ ಸರಿದಿದ್ದಾರೆ. ಹೀಗಾಗಿ ತೆಲಂಗಾಣದಲ್ಲಿ ಮೊದಲ ಲಸಿಕೆಯನ್ನ ಪೌರ ಕಾರ್ಮಿಕ ಮಹಿಳೆ ಕೃಷ್ಣಮ್ಮ ಸ್ವೀಕರಿಸಿದ್ದಾರೆ. ಲಸಿಕೆ ಸ್ವೀಕರಿಸಿದ ಬಳಿಕ ಮಾತನಾಡಿದ ಕೃಷ್ಣಮ್ಮ, ನನಗೂ ಮೊದಲು ಸ್ವಲ್ಪ ಭಯವಾಯಿತು. ಬಳಿಕ ಆರೋಗ್ಯ ಸಚಿವರು ಹಾಗೂ ವೈದ್ಯಾಧಿಕಾರಿಗಳು ಧೈರ್ಯ ತುಂಬಿದರು. ಎಲ್ಲರೂ ಹೋಗಿ ಲಸಿಕೆಯನ್ನ ಪಡೆದುಕೊಳ್ಳಿ ಎಂದು ಮನವಿ ಮಾಡಿದ್ರು.
ಸೋಮವಾರ ಪ್ರಧಾನಿ ಮೋದಿ ಲಸಿಕೆ ಹಂಚಿಕೆಗೆ ಕುರಿತಾದ ಸಭೆಯಲ್ಲಿ ಕೊರೊನಾ ಲಸಿಕೆ ಪಡೆಯಲು ರಾಜಕಾರಣಿಗಳು ಮುಂಚೂಣಿ ಪಟ್ಟಿಯಲ್ಲಿ ಇರಬಾರದು. ಜನರಿಗೆ ಆತ್ಮ ವಿಶ್ವಾಸ ತುಂಬಬೇಕಾದ ಜವಾಬ್ದಾರಿ ಇದ್ದರೂ ಸಹ ಸರದಿಯನ್ನ ಪಾಲಿಸಿಯೇ ಲಸಿಕೆ ಪಡೆಯಬೇಕು ಎಂದು ಸೂಚನೆ ನೀಡಿದ್ದರು.
ಅಲ್ಲದೇ ಚುಚ್ಚು ಮದ್ದಿನ ಮೊದಲ ಹಂತದಲ್ಲಿ ಯಾವುದೇ ಜನಪ್ರತಿನಿಧಿ ಲಸಿಕೆ ಸ್ವೀಕರಿಸುವಂತಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಹರಿಯಾಣ ಸರ್ಕಾರ ಪಂಚಾಯ್ತಿ ವ್ಯಾಪ್ತಿಯಿಂದ ಸಂಸತ್ತಿನವರೆಗಿನ ಜನ ಪ್ರತಿನಿಧಿಗಳನ್ನ ಮುಂಚೂಣಿ ಸಿಬ್ಬಂದಿ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಮಾಡಿತ್ತು.