ಕಟ್ಟಡ ಕುಸಿಯುವ ಕೆಲವೇ ಸಮಯದ ಮುಂಚೆ 75 ಮಂದಿಯನ್ನ ಕಟ್ಟಡದಿಂದ ಹೊರತರುವಲ್ಲಿ ಯುವಕನೊಬ್ಬ ಯಶಸ್ವಿಯಾದ ಘಟನೆ ಮುಂಬೈನ ದೊಂಬಿವಿಲಿಯಲ್ಲಿ ನಡೆದಿದೆ.
ಗುರುವಾರ ಮುಂಜಾನೆ 4.30ರ ಸುಮಾರಿಗೆ ಕುಸಿತಗೊಂಡ 40 ವರ್ಷದ ಹಳೆಯ ಕಟ್ಟಡದಲ್ಲಿ 18 ಕುಟುಂಬದ 75 ಮಂದಿ ವಾಸವಿದ್ದರು ಎನ್ನಲಾಗಿದೆ. ಕುನಾಲ್ ಎಂಬ ಹೆಸರಿನ ಯುವಕ ರಾತ್ರಿಯೆಲ್ಲ ವೆಬ್ ಸೀರಿಸ್ ನೋಡುತ್ತಾ ಮಲಗಿದ್ದ. ನಸುಕಿನ ಜಾವ ಅಡುಗೆ ಮನೆಯಲ್ಲಿ ಕುಸಿತವಾಗಿದ್ದನ್ನು ಕಂಡಿದ್ದಾನೆ. ಕೂಡಲೇ ಈತ ಕಟ್ಟಡದಲ್ಲಿ ವಾಸವಿದ್ದ ಎಲ್ಲರನ್ನ ಎಬ್ಬಿಸಿ ಹೊರತರುವಲ್ಲಿ ಯಶಸ್ವಿಯಾಗಿದ್ದಾನೆ.
ಪೂರ್ತಿ ಕಟ್ಟಡ ಕುಸಿಯೋಕೆ ಮುನ್ನವೇ ಎಲ್ಲರೂ ಅಲ್ಲಿಂದ ಹೊರಬಂದಿದ್ದಾರೆ. ಹೀಗಾಗಿ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಅಂತಾ ದೊಂಬಿವಿಲಿ ವಾರ್ಡ್ ಅಧಿಕಾರಿ ಭರತ್ ಪವಾರ್ ಮಾಹಿತಿ ನೀಡಿದ್ದಾರೆ.