ತಮಿಳುನಾಡಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. 20 ದಿನಗಳಿಂದ ತಾಯಿ ಶವದ ಜೊತೆ ಮಕ್ಕಳಿಬ್ಬರು ವಾಸವಾಗಿದ್ದ ಘಟನೆ ಬೆಳಕಿಗೆ ಬಂದಿದೆ. ಪೂಜಾರಿ ಹೇಳಿಕೆ ಮೇರೆಗೆ ಮಕ್ಕಳು ತಾಯಿ ಮತ್ತೆ ಬರ್ತಾಳೆಂದು ಪೂಜೆ ಮಾಡಿ ಶವದ ಮುಂದೆ ದಿನ ಕಳೆದಿದ್ದಾರೆ.
ಮೃತ ಮಹಿಳೆ ಇಂದಿರಾಗೆ ಇಬ್ಬರು ಮಕ್ಕಳು. ಪೊಲೀಸ್ ಕಾನ್ಸ್ಟೇಬಲ್ ಆಗಿದ್ದ ಇಂದಿರಾ ಕೆಲ ವರ್ಷಗಳ ಹಿಂದೆಯೇ ಗಂಡನಿಂದ ಬೇರೆಯಾಗಿದ್ದಳು. ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಇಂದಿರಾ ಡಿಸೆಂಬರ್ 7ರಂದು ಪ್ರಜ್ಞೆ ತಪ್ಪಿದ್ದಾಳೆ. ಆದ್ರೆ ಆಕೆಯನ್ನು ಆಸ್ಪತ್ರೆಗೆ ದಾಖಲಿಸದಂತೆ ಪೂಜಾರಿ ಹೇಳಿದ್ದಾನೆ. ಇದಕ್ಕೆ ಇಂದಿರಾ ತಂಗಿ ಕೂಡ ಒಪ್ಪಿದ್ದಾಳೆ.
ಕೆಲ ದಿನಗಳಿಂದ ಇಂದಿರಾ ಕೆಲಸಕ್ಕೆ ಬರದ ಕಾರಣ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಇಂದಿರಾ ಮನೆಗೆ ಬಂದಿದ್ದಾರೆ. ಮನೆಯಿಂದ ಬರ್ತಿದ್ದ ವಾಸನೆ ಹಾಗೂ ಮಕ್ಕಳ ಹೇಳಿಕೆ ಅನುಮಾನ ಮೂಡಿಸಿದ್ದು, ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮನೆಗೆ ಬಂದ ಪೊಲೀಸರು ವಿಚಾರಣೆ ನಡೆಸಿದಾಗ ಇಂದಿರಾ ಸಾವನ್ನಪ್ಪಿರುವುದು ಗೊತ್ತಾಗಿದೆ. ಹಾಗೆ ಪೂಜಾರಿ ಸುದರ್ಶನ್ ಕೂಡ ಇಂದಿರಾ ಮನೆಯಲ್ಲಿ ಮಕ್ಕಳ ಜೊತೆ 20 ದಿನಗಳಿಂದ ಇದ್ದ ಎಂಬುದು ಬಹಿರಂಗವಾಗಿದೆ. ಪೊಲೀಸರು ಪೂಜಾರಿ ಹಾಗೂ ಇಂದಿರಾ ತಂಗಿ ವಿಚಾರಣೆ ನಡೆಸುತ್ತಿದ್ದಾರೆ.