ತಮಿಳುನಾಡು ವಿಧಾನಸಭಾ ಚುನಾವಣೆಯ ಹೊಸ್ತಿಲಲ್ಲೇ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಚುನಾವಣಾ ಅಧಿಕಾರಿಗಳು ರಸ್ತೆಯಲ್ಲಿ ಬಿದ್ದಿದ್ದ 1 ಕೋಟಿ ರೂಪಾಯಿ ಮೌಲ್ಯದ ನಗದನ್ನ ಹೊಂದಿದ್ದ ಚೀಲವನ್ನ ವಶಕ್ಕೆ ಪಡೆದಿದ್ದಾರೆ.
ಮಂಗಳವಾರ ರಾತ್ರಿ ಎರಡು ಕಾರಿನಲ್ಲಿ ಬಂದ ಜನರ ಗುಂಪು ರಸ್ತೆ ಬದಿಯಲ್ಲಿ ಜಗಳ ಮಾಡುತ್ತಿತ್ತು. ಆದರೆ ಇದರಲ್ಲಿ ಒಂದು ಗುಂಪು ಪೊಲೀಸರನ್ನ ನೋಡುತ್ತಿದ್ದಂತೆಯೇ ಸ್ಥಳದಿಂದ ಕಾಲ್ಕಿತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರಸ್ತೆ ಬದಿ ಕಾರಿನ ಸಮೀಪದಲ್ಲೇ ಇದ್ದ ಗೋಣಿಚೀಲವನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಗೋಣಿಚೀಲವನ್ನ ತೆರೆದು ನೋಡಿದಾಗ ಅದರಲ್ಲಿ ಹಣ ಇದ್ದಿದ್ದನ್ನ ಪೊಲೀಸರು ಗಮನಿಸಿದ್ದಾರೆ. ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಇನ್ನು ಹಣದ ಚೀಲವಿದ್ದ ಸ್ಥಳದಲ್ಲೇ ಕಾರನ್ನ ನಿಲ್ಲಿಸಿದ್ದ ಎಐಎಡಿಎಂಕೆ ಪಕ್ಷಕ್ಕೆ ಸೇರಿದ ಕಾರ್ಯಕರ್ತರು ನಾವು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿದ್ದೇವೆ ಅಷ್ಟೇ. ನಮಗೂ ಹಣದ ಚೀಲಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪೊಲೀಸರಿಗೆ ಹೇಳಿದ್ದಾರೆ.
ವಾರಸುದಾರರಿಲ್ಲದ ಈ ಹಣವನ್ನ ರಾಜ್ಯ ಸರ್ಕಾರದ ಖಜಾನೆಗೆ ಜಮಾ ಮಾಡಲಾಗಿದೆ. ಸ್ಥಳದಿಂದ ಪರಾರಿಯಾದ ಕಾರನ್ನ ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ.
ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ವಿಧಾನಸಭಾ ಚುನಾವಣೆ ನಡೆಯಲಿದೆ. ಮೇ 2ರಂದು ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.